ADVERTISEMENT

ಕೃಷ್ಣನಷ್ಟೇ ಗೌರವ ಕನಕದಾಸರಿಗೂ ಸಿಗಬೇಕು: ಕಾಗಿನೆಲೆ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 10:08 IST
Last Updated 13 ನವೆಂಬರ್ 2017, 10:08 IST
ನಿರಂಜನಾನಂದಪುರಿ ಸ್ವಾಮೀಜಿ
ನಿರಂಜನಾನಂದಪುರಿ ಸ್ವಾಮೀಜಿ   

ಉಡುಪಿ: ಭಕ್ತಿಯ ಮೂಲಕ ದೇವರನ್ನು ತನ್ನಡೆಗೆ ತಿರುಗಿಸಿಕೊಂಡ ಕನಕದಾಸರು ಭಗವಂತನಿಗೆ ಸಮಾನ. ಉಡುಪಿಯಲ್ಲಿ ಶ್ರೀಕೃಷ್ಣನಿಗೆ ಎಷ್ಟು ಗೌರವ ಇದೆಯೋ ಅಷ್ಟೇ ಗೌರವ ಕನಕನದಾಸರಿಗೂ ಸಿಗಬೇಕು ಎಂದು ಕಾಗಿನೆಲೆ ಮಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ಹಾಲು ಮತ ಮಹಾಸಭಾ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ‘ರಾಮನ ಭಕ್ತ ಹನುಮಂತನನ್ನು ಪೂಜ್ಯ ಭಾವನೆಯಿಂದ ನೋಡಲಾಗುತ್ತದೆ. ಅದೇ ರೀತಿ ಸ್ವಾಮೀಜಿ ಅವರು ಕನಕದಾಸರಿಗೆ ಗೌರವ ಕೊಡಬೇಕು’ ಎಂದರು.

‘ಕನಕದಾಸರ ಭಕ್ತಿಗೆ ಮೆಚ್ಚಿದ ಕೃಷ್ಣ ಪೂರ್ವ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ತಿರುಗಿದ್ದು ಇತಿಹಾಸ ಹಾಗೂ ಜನ ಮಾನಸದಲ್ಲಿ ದಾಖಲಾಗಿದೆ. ಕೆಲವರು ಪ್ರಚಾರ ಪಡೆಯುವ ಉದ್ದೇಶದಿಂದ ಕೃಷ್ಣ ತಿರುಗಲಿಲ್ಲ ಎನ್ನುತ್ತಾರೆ. ಅದು ಅವರ ಅಭಿಪ್ರಾಯವಷ್ಟೇ’ ಎಂದು ತಿಳಿಸಿದರು.

ADVERTISEMENT

‘ಆಚಾರ ವಿಚಾರಗಳಲ್ಲಿ ನಮ್ಮ ಹಾಗೂ ಪೇಜಾವರ ಸ್ವಾಮೀಜಿ ಅವರ ಮಧ್ಯೆ ಭಿನ್ನತೆ ಇದ್ದರೂ ಅವರಿಗೆ ನಮ್ಮ ಮೇಲೆ ವಿಶೇಷ ಪ್ರೀತಿ ಇದೆ. ಮಠ ಸ್ಥಾಪನೆಯ 25ನೇ ವರ್ಷಾಚರಣೆಗೆ ಅವರನ್ನು ಆಹ್ವಾನಿಸಲಾಗುವುದು. ಉಡುಪಿಯಲ್ಲಿ ಮಠ ಸ್ಥಾಪಿಸಬೇಕು ಎಂಬುದು ಬಹು ದಿನಗಳ ಕನಸು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.