ADVERTISEMENT

ಕೆರೆ ನೀರು ತೆಗೆಯುತ್ತಿರುವುದಕ್ಕೆ ಸ್ಥಳೀಯರ ವಿರೋಧ: ವಾಗ್ವಾದ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 5:07 IST
Last Updated 24 ಮಾರ್ಚ್ 2017, 5:07 IST

ಸಿದ್ದಾಪುರ: ಕಾಡುಪ್ರಾಣಿಗಳು, ರೈತರಿಗೆ ನೀರಿನ ಆಸರೆಯಾಗಿರುವ ಆರ್ಡಿ ಮಾಬ್ಳಿ ಕೆರೆಯ ನೀರನ್ನು ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಒಯ್ಯುತ್ತಿರುವುದನ್ನು ಸ್ಥಳೀಯರು ತಡೆದ ಘಟನೆ ಗುರುವಾರ ನಡೆದಿದೆ.

ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್ಡಿ ಪರಿಸರದ ಮಾಬ್ಳಿ ಎಂಬಲ್ಲಿ ಕೆರೆಯೊಂದಿದೆ. ಐದಾರು ದಿನಗಳಿಂದ ಈ ಕೆರೆಯಲ್ಲಿರುವ ನೀರನ್ನು ಆರ್ಡಿ ಚಿತ್ತೇರಿ ಬಳಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಯ ಬಳಕೆಗೆ ಕೊಂಡೊಯ್ಯಲಾಗುತ್ತಿತ್ತು.

ಇದರಿಂದ ಸ್ಥಳೀಯರ ಬಾವಿಯಲ್ಲಿ ನೀರು ಕಡಿಮೆಯಾಗಿದೆ ಎಂದು ಸ್ಥಳೀಯರು ಆರೋಪಿಸಿ, ಗುರುವಾರ ಬೆಳಿಗ್ಗೆ ಟ್ಯಾಂಕರ್‌ನಲ್ಲಿ ನೀರು ಸಾಗಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಸಂಬಂಧ ಸ್ಥಳೀಯರು ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರ ನಡುವೆ ವಾಗ್ವಾದವೂ ನಡೆಯಿತು.

ಕಾಡುಪ್ರಾಣಿಗಳಿಗೆ ಆಸರೆ!:  ಸೋಮೇ ಶ್ವರ ಅಭಯಾರಣ್ಯದ ಪಕ್ಕದಲ್ಲಿಯೇ ಕೆರೆಯಿರುವುದರಿಂದ ಕಾಡುಪ್ರಾಣಿಗಳು ಸದಾ ಈ ಕೆರೆಯ ನೀರನ್ನೇ ಆಶ್ರಯಿಸಿವೆ. ಕೆರೆಯ ನೀರನ್ನು ಬರಿದುಗೊಳಿಸುವುದ ರಿಂದ ಕಾಡುಪ್ರಾಣಿಗಳಿಗೆ ಮಾತ್ರವಲ್ಲದೆ, ಸುತ್ತಲಿರುವ ಕೃಷಿ ಕುಟುಂಬಗಳಿಗೆ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣ ವಾಗುತ್ತದೆ. ಆದ್ದರಿಂದ ಕೆರೆ ನೀರನ್ನು ಒಯ್ಯಬಾರದು ಎನ್ನುವುದು ಸ್ಥಳೀಯರ ಆಗ್ರಹ.

‘ಕೆರೆಯ ನೀರನ್ನು ಕೊಂಡೊಯ್ಯು ತ್ತಿರುವ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಕರೆ ಮಾಡಿದರೆ ಪತ್ರಿಕೆಗೆ ವಿಷಯ ತಿಳಿಸುವುದು ಬೇಡ. ಅಲ್ಲದೆ, ತಾಲ್ಲೂಕು ಪಂಚಾಯಿತಿ ಸದಸ್ಯರು ಸರ್ಕಾರಿ ಕೆಲಸಕ್ಕೆ ಕೆರೆಯ ನೀರನ್ನು ಕೊಂಡೊಯ್ಯಲಿ ಎಂದು ತಿಳಿಸಿದ್ದಾಗಿ ಹೇಳಿದರು.

ಕೃಷಿ ಕುಟುಂಬಗಳು, ಕಾಡುಪ್ರಾಣಿಗಳಿಗೆ ಆಸರೆಯಾಗಿರುವ ಕೆರೆಯ ನೀರನ್ನು ಕೊಂಡೊಯ್ಯದಂತೆ ತಡೆಯಬೇಕು ಹಾಗೂ ಅಂತರ್ಜಲ ಹೆಚ್ಚಿಸಲು ಇದು ಸಹಕಾರಿಯಾಗಿದೆ ಎನ್ನುವ ಉದ್ದೇಶದಿಂದ ತಡೆದಿದ್ದೇವೆ’ ಎಂದು ಸ್ಥಳೀಯ ನಿವಾಸಿ ರೋಹಿತ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆರೆ ಸಮೀಪದಲ್ಲಿರಿಸಿದ ಮೋಟಾರ್ ಪಂಪ್‌ ಸೆಟ್ ಸ್ಥಳೀಯರು ಹಾಳು ಮಾಡಿದ್ದಾರೆ. ಅವರು ಮೊದಲೇ ತಿಳಿಸಿದ್ದರೆ ನಾವು ನೀರು ತೆಗೆಯುತ್ತಿರಲಿಲ್ಲ. ಪಂಪ್‌ ಹಾಳು ಮಾಡಿದ್ದು, ಸರಿಪಡಿಸಲು ಸಾವಿರಾರು ರೂಪಾಯಿ ತಗುಲಿದೆ’ ಎಂದು ಗುತ್ತಿಗೆದಾರ ಪ್ರತಾಪ್ ತಿಳಿಸಿದರು.

ಪತ್ರಕರ್ತರಿಗೆ ಬೆದರಿಕೆ!
ನೀರಿನ ಸಮಸ್ಯೆ ಕುರಿತು ವರದಿ ಮಾಡಲು ತೆರಳಿದ್ದ ‘ಪ್ರಜಾವಾಣಿ’ ಪ್ರತಿನಿಧಿ ಸಂದೇಶ್ ಶೆಟ್ಟಿ ಅವರಿಗೆ ತಾಲ್ಲೂಕು ಪಂಚಾಯಿತಿ ಬಿಜೆಪಿ ಸದಸ್ಯ ಚಂದ್ರಶೇಖರ ಶೆಟ್ಟಿ ಸೂರ್ಗೋಳಿ ವರದಿ ಮಾಡದಂತೆ ಬೆದರಿಕೆ ಹಾಕಿದ್ದಾರೆ.

‘ಬೆಳ್ವೆ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಮಸ್ಯೆಗಳು ಮಾತ್ರ ನಿಮಗೆ ಕಾಣು ವುದೇ? ಬೇರೆ ಪತ್ರಿಕೆಯ ವರದಿಗಾರರಿಗೆ ಕಾಣದ ಅವ್ಯವಸ್ಥೆ ನಿಮಗೆ ಮಾತ್ರವೇ? ನೀವು ವರದಿ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವುದು ನಿಮ್ಮ ಭ್ರಮೆಯೇ? ಉದಯ ಕುಮಾರ್ ಪೂಜಾರಿ ಸೂರ್ಗೋಳಿಯಲ್ಲಿ ಕೆರೆ ರಚಿಸಿದ್ದು ಆ ಕುರಿತು ವರದಿ ತಯಾರಿಸಿ? ಚಿಕ್ಕ ಸಮಸ್ಯೆಗಳಿದ್ದಾಗ ದೊಡ್ಡ ಪತ್ರಕರ್ತನಂತೆ ಓಡಿ ಬಂದು ವರದಿ ಮಾಡುತ್ತೀರಿ’ ಎಂದು ಬೆದರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT