ADVERTISEMENT

‘ ಕ್ಷೇತ್ರಗಳ 20 ಅಭ್ಯರ್ಥಿಗಳು ಉಪಸ್ಥಿತಿ’

ಮೇ1 ರಂದು ಉಡುಪಿಗೆ ಪ್ರಧಾನಿ: ಸಾರ್ವಜನಿಕ ಸಭೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 13:20 IST
Last Updated 23 ಏಪ್ರಿಲ್ 2018, 13:20 IST

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಮೇ 1ರಂದು ಉಡುಪಿಗೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣ ಮಠಕ್ಕೆ ಭೇಟಿ ನೀಡುವ ಅವರು ಕೃಷ್ಣನ ದರ್ಶನ ಪಡೆಯುವರು. ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ, ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡುವರು.

ನಗರದ ಎಂಜಿಎಂ ಕಾಲೇಜಿನ ಮೈದಾನದಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡುವರು. 1 ಲಕ್ಷಕ್ಕೂ ಅಧಿಕ ಮಂದಿ ಸಭೆಯಲ್ಲಿ ಭಾಗವಹಿಸುವರು. ಕೊಡುಗು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ವಿವಿಧ ಕ್ಷೇತ್ರಗಳ 20 ಅಭ್ಯರ್ಥಿಗಳು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ADVERTISEMENT

ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ಈ ಬಾರಿ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಐದೂ ಕ್ಷೇತ್ರದಲ್ಲಿಯೂ ಗೆಲ್ಲುವ ವಿಶ್ವಾಸ ಇದೆ. ಕುಂದಾಪುರದ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬೈಂದೂರು ಕ್ಷೇತ್ರದ ಅಭ್ಯರ್ಥಿ ಸುಕುಮಾರ್‌ ಶೆಟ್ಟಿ ಅವರು ನಾಮ ಪತ್ರ ಸಲ್ಲಿಸಿದ್ದಾರೆ. ಕಾರ್ಕಳದ ಸುನಿಲ್ ಕುಮಾರ್ 23ರಂದು ನಾಮಪತ್ರ ಸಲ್ಲಿಸುವರು. ಅದಕ್ಕೂ ಮೊದಲು ಅವರು ಕಾರ್ಕಳದ ತಾಲ್ಲೂಕು ಕಚೇರಿಯ ಸಮೀಪ ಬೆಳಿಗ್ಗೆ 11.45ಕ್ಕೆ ಬೃಹತ್ ಸಮಾವೇಶ ನಡೆಯಲಿದ್ದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಭಾಗವಹಿಸುವರು. ವಿಧಾನ ಪರಿಷತ್‌ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಚಿತ್ತರಂಜನ್‌ ವೃತ್ತದ ಬಳಿ ಬೃಹತ್‌ ಸಾರ್ವಜನಿಕ ಸಭೆ ನಡೆಸಿದ ನಂತರ ಮಧ್ಯಾಹ್ನ 12.15ಕ್ಕೆ ರಘುಪತಿ ಭಟ್‌ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಕಳೆದ 5ವರ್ಷಗಳಿಂದ ಅನೇಕ ಹೋರಾಟ ನಡೆಸಲಾಗಿದೆ. ರಾಜ್ಯದ ಪ್ರಣಾಳಿಕೆ ಬಿಡುಗಡೆಯಾದ ನಂತರ ಜಿಲ್ಲೆಯ ಪ್ರಣಾಳಿಕೆ ಬಿಡುಗ
ಡೆಯಾಗಲಿದೆ. ಬಿಜೆಪಿ ಸರ್ಕಾರ ಬಂದರೆ ಬಾಕಿ ಇರುವ 3,000 ನಿವೇಶ ಅರ್ಜಿಯನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ. ಮರುಳು ಸಮಸ್ಯೆಗೆ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಲಾಗುತ್ತದೆ ಎಂದರು.

ಕಾಂಗ್ರೆಸ ಸರ್ಕಾರ ಆಡಳಿತಕ್ಕೆ ಬಂದ ನಂತರ ಜಾತಿವಾರು ಸವಲತ್ತು ನೀಡುವ ಕೆಟ್ಟ ಸಂಪ್ರಾದಾಯವನ್ನು ರೂಢಿಗೆ ತಂದಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದಂತೆ ಎಪಿಎಲ್‌ ಪಡಿತರ ಕಾರ್ಡ್‌ ಅನ್ನು ಬಿಪಿಎಲ್‌ ಆಗಿ ಬದಲಾಯಿಸಲಾಗುತ್ತಿದೆ ಎಂದು ಆರೋಪಿಸಿದರು.

ಕೋಟಾ ಶ್ರೀನಿವಾಸ ಪೂಜಾರಿ, ಯಶ್‌ಪಾಲ ಸುವರ್ಣ, ಶಂಕರ್‌ ಪೂಜಾರಿ, ಬಿ.ರವಿ ಅಮೀನ್‌ ಇದ್ದರು.

ರಾಜನಾಥ ಸಿಂಗ್‌ ಉಡುಪಿಗೆ ಇಂದು

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕಾರ್ಕಳದ ಕೋರ್ಟ್‌ ಹೆಲಿ ಪ್ಯಾಡ್‌ಗೆ ಇಂದು ಬೆಳಿಗ್ಗೆ 11.40 ಆಗಮಿಸಲಿದ್ದಾರೆ. ನಂತರ ಅವರು ಬಿಜೆಪಿಯ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡುವರು. ನಂತರ ಬೆಳ್ತಂಗಡಿ ಅಭ್ಯರ್ಥಿ ಹರೀಶ್‌ ಪೂಂಜಾ ಅವರೊಂದಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಉಡುಪಿಗೆ ಮತ್ತೆ ಮಧ್ಯಾಹ್ನ 2.45 ಬರಲಿದ್ದಾರೆ. ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುವರು. ಪರ್ಯಾಯ ಪಲಿಮಾರು ವಿದ್ಯಾಧೀಶ ಹಾಗೂ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆರ್ಶಿವಾದ ಪಡೆಯುವರು. ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವರು. ಮಣಿಪಾಲದ ಕಂಟ್ರಿ ಇನ್ ಹೋಟೆನಲ್ಲಿ ಸಂಜೆ 4ಕ್ಕೆ ನಡೆಯುವ ಚಿಂತಕರ ಮಂಥನ ಕಾಯರ್ಕ್ರಮದಲ್ಲಿ ಭಾಗವಹಿಸುವರು. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲು ಅವಕಾಶ ಇದೆ. ಈ ಸಂವಾದ ಕಾರ್ಯಕ್ರಮದಲ್ಲಿ ಪ್ರಚಲಿತ ರಾಷ್ಟ್ರೀಯ ಮತ್ತು ಸ್ಥಳೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.

**

ಹಾಲಾಡಿ ಶ್ರೀನಿವಾಸಿ ಶೆಟ್ಟಿ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಕೆಲವು ಕಾರ್ಯಕರ್ತರು ಅಸಮಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಸಭೆ ನಡೆಸಿ ಗೊಂದಲ ಸರಿಪಡಿಸಲಾಗಿದೆ
– ಕೋಟ ಶ್ರೀನಿವಾಸ ಪೂಜಾರಿ, ಎಂಎಲ್‌ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.