ADVERTISEMENT

ಗಂಗೊಳ್ಳಿ ಅಳಿವೆಯಲ್ಲಿ ಹೂಳು : ಮುಂದುವರಿದ ಅವಘಡದ ಸರಣಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 8:56 IST
Last Updated 5 ಸೆಪ್ಟೆಂಬರ್ 2017, 8:56 IST

ಬೈಂದೂರು : ಗಂಗೊಳ್ಳಿ ಅಳಿವೆಯಲ್ಲಿ ತುಂಬಿರುವ ಹೂಳಿನ ದಿಣ್ಣೆ ಮೀನುಗಾರರಿಗೆ ಕಂಟಕವಾಗಿದೆ.  ಹೂಳೆತ್ತವ ಕಾರ್ಯ ತ್ವರಿತ ಆಗಬೇಕು ಎಂಬ ಒತ್ತಾಯ ಪ್ರಬಲವಾಗುತ್ತಿದೆ. ಶನಿವಾರ ರಾತ್ರಿ ಸಮುದ್ರ ಮೀನುಗಾರಿಕೆ ಮುಗಿಸಿ ಅಳಿವೆ ಮೂಲಕ ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಮರಳುತ್ತಿದ್ದ ಚಕ್ರವರ್ತಿ ಹೆಸರಿನ ಆಳ ಸಮುದ್ರ ಮೀನುಗಾರಿಕಾ ಬೋಟ್ ಅಳಿವೆಯಲ್ಲಿ ತುಂಬಿರುವ ಹೂಳಿನ ದಿಣ್ಣೆಗೆ ತಗಲಿ ಅವಘಡಕ್ಕೀಡಾಗಿದೆ. ಅದರಲ್ಲಿದ್ದ ಎಂಟು ಮಂದಿ ಮೀನುಗಾರರು ಸುರಕ್ಷಿತವಾಗಿ ಪಾರಾಗಿದ್ದಾರೆ. ಬೋಟ್‌ಗೆ ಸ್ವಲ್ಪ ಹಾನಿಯಾಗಿದೆ. ರಾತ್ರಿ ವೇಳೆ ಸಮುದ್ರದಲ್ಲಿ ಇಳಿತ ಇದ್ದ ಕಾರಣ ಬೋಟ್ ಸಮುದ್ರದತ್ತ ಸೆಳೆಯಲ್ಪಡಲಿಲ್ಲ ಎಂದು ಮೀನುಗಾರರು ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ಅದನ್ನು ಇನ್ನೊಂದು ಬೋಟ್‌ನ ಸಹಾಯದಿಂದ ನದಿಗೆ ಎಳೆದು ತರಲಾಯಿತು.

ಹೂಳು ಎಂಬ ಕಂಟಕ : ಗಂಗೊಳ್ಳಿ ಬಂದರಿನ ಬ್ರೇಕ್ ವಾಟರ್ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಇನ್ನೊಂದೆಡ ಅಳಿವೆಯಲ್ಲಿ ಹೂಳು ಮತ್ತು ಮರಳು ತುಂಬಿ ಕಿರಿದಾಗಿರುವುದಲ್ಲದೆ ಆಳ ಕಡಿಮೆಯಾಗಿದೆ.

ನಾಡದೋಣಿ ಮತ್ತು ಯಾಂತ್ರಿಕ ಬೋಟ್‌ಗಳು ಅಳಿವೆಯಲ್ಲಿನ ಮರಳಿನ ದಿನ್ನೆಗೆ ತಗಲಿ ಮಗುಚಿಕೊಳ್ಳುವುದು, ಹಾನಿಗೊಳಗಾಗುವುದು ಸಾಮಾನ್ಯವೆನಿಸಿದೆ. ಹಲವು ವರ್ಷಗಳಿಂದ ಇಲ್ಲಿ ಬೋಟ್‌ಗಳಿಗೆ ಹಾನಿ, ಜೀವಹಾನಿ ಸಂಭವಿಸುತ್ತಿದ್ದರೂ ಈ ಕಂಟಕವನ್ನು ದೂರಮಾಡಬೇಕೆಂದು ಮೀನುಗಾರರು ಸರ್ಕಾರದ ಮೇಲೆ ಒತ್ತಾಯ ಹೇರುತ್ತಿದ್ದರೂ ಪರಿಣಾಮವಾಗಿಲ್ಲ.

ADVERTISEMENT

ಇದು ಈಗಷ್ಟೇ ಆರಂಭವಾದ ಮೀನುಗಾರಿಕಾ ಋತುವಿನ ಎರಡನೆಯ ಅವಘಡ, ಗುರುವಾರವಷ್ಟೆ ನಾದೋಣಿ ಮಗುಚಿ, ಹಾನಿಗೊಂಡದ್ದಲ್ಲದೆ, ಇಬ್ಬರು ಮೀನುಗಾರರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಅದಾದ ಎರಡೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ.

ಈ ಸರಣಿ ಅವಘಡದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ನಾದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ ಈ ನಿಟ್ಟಿಲ್ಲಿ ಮೀನುಗಾರರ ಕೂಗು ಅರಣ್ಯರೋದನವಾಗುತ್ತಿದೆ. ಸಂಬಂಧಿಸಿದವರು ಎಚ್ಚತ್ತು ಹೂಳೆತ್ತಲು ಕ್ರಮ ಕೈಗೊಳ್ಳಬೇಕು. ಬ್ರೇಕ್ ವಾಟರ್ ಕಾಮಗಾರಿಯನ್ನು ಚುರುಕುಗೊಳಿಸಿ ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.