ADVERTISEMENT

ಗಂಡು ಹುಟ್ಟಿದರೆ ಸಂಭ್ರಮಿಸುವ ಕಾಂಗ್ರೆಸ್‌

ವಂಡ್ಸೆ: ಬಿಜೆಪಿ ನವಶಕ್ತಿ ಸಮಾವೇಶ– ಆಯನೂರು ಟೀಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 11:02 IST
Last Updated 20 ಮಾರ್ಚ್ 2018, 11:02 IST

ಕುಂದಾಪುರ: ‘ಗಾಂಧಿ ಕುಟುಂಬದಲ್ಲಿ ಗಂಡು ಮಗು ಹುಟ್ಟಿದರೇ, ದೇಶದ ಪ್ರಧಾನಿ ಹುಟ್ಟಿದ ಎಂದು ಸಂತೋಷ ಪಡುವ ಕಾಂಗ್ರೆಸ್‌ ಪಕ್ಷಕ್ಕಿಂತ ಬಿಜೆಪಿ ಸಂಪೂರ್ಣ ಭಿನ್ನ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನೂ ದೇಶದ ಪ್ರಧಾನಿ ಸ್ಥಾನ ಏರಲು ಸಾಧ್ಯ ಎನ್ನುವುದನ್ನು ನರೇಂದ್ರ ಮೋದಿ ಸಾಧಿಸಿ ತೋರಿಸಿದ್ದಾರೆ’ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ಹೇಳಿದರು.

ಇಲ್ಲಿಗೆ ಸಮೀಪದ ವಂಡ್ಸೆಯ ನೆಂಪು ಪೆಟ್ರೋಲ್‌ ಬಂಕ್‌ ಬಳಿಯಲ್ಲಿ ಭಾನುವಾರ ನಡೆದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಬೂತ್‌ ಮಟ್ಟದ ಪ್ರತಿನಿಧಿಗಳ ಸಮಾಗಮ ‘ನವಶಕ್ತಿ ಸಮಾವೇಶವನ್ನು’ ಉದ್ಘಾಟಿಸಿ ಮಾತನಾಡಿದರು.

‘ದೇಶದಲ್ಲಿ ಪ್ರಸ್ತುತ ಇರುವುದು ದೇಶಕ್ಕಾಗಿ ಸ್ವಾತಂತ್ರ್ಯ ಹೋರಾಟ ಮಾಡಿದ ಕಾಂಗ್ರೆಸ್‌ ಪಕ್ಷವಲ್ಲ, ಇಲ್ಲಿರುವುದು ಇಂದಿರಾ ಕಾಂಗ್ರೆಸ್‌ ಪಕ್ಷ. ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಗಲೆಲ್ಲ ನಿದ್ರೆ ಮಾಡಿ ಕಾಲ ಕಳೆದರೇ ರಾತ್ರಿ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ನಿದ್ರೆ ಮಾಡುವ ಮುಖ್ಯಮಂತ್ರಿಯ ಬದಲು ದೇಶದ ಅಭಿವೃದ್ಧಿ ಬಗ್ಗೆ ಕಾಳಜಿ ಇರುವ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಕಾರ್ಯಕರ್ತರು ಶ್ರಮವಹಿಸಬೇಕು’ ಎಂದು ಅವರು ನುಡಿದರು.

ADVERTISEMENT

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ.ಎಂ.ಸುಕುಮಾರ ಶೆಟ್ಟಿ, ಬೈಂದೂರು ವಿಧಾನಸಭಾ ಕ್ಷೇತ್ರದ 243 ಬೂತ್‌ ಮಟ್ಟದಲ್ಲಿ ಪಕ್ಷವನ್ನು ಸಮರೋಪಾದಿಯಲ್ಲಿ ಸಂಘಟಿಸಲಾಗುತ್ತಿದೆ. ಶಾಸಕರು ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಕೇವಲ ಚುನಾವಣೆ ಬಂದಾಗ ಮಾತ್ರ ಕ್ಷೇತ್ರದ ಅಭಿವೃದ್ಧಿ ನೆನಪಾಗುತ್ತದೆ ಎಂದು ನುಡಿದರು.

ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ಸದಾನಂದ ಉಪ್ಪಿಕುದ್ರು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ ಕುತ್ಯಾರು, ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಭಾರಿ ರವಿ ಅಮೀನ್, ಸಂಚಾಲಕ ಪ್ರವೀಣ್‌ ಕುಮಾರ್ ಶೆಟ್ಟಿ ಗುರ್ಮೆ, ಬೈಂದೂರು ಬಿಜೆಪಿ ಪ್ರಧಾನ ಕಾರ್ಯದರ್ಶಿ ದೀಪಕ್‌ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಣಪತಿ ಟಿ.ಶ್ರೀಯಾನ್‌ ಹಾಗೂ ಪದ್ಮನಾಭನ್ ಇದ್ದರು.

ಈ ಸಂದರ್ಭದಲ್ಲಿ ಅಭಿಲಾಷ್ ಶೆಟ್ಟಿ ಹಾಗೂ ರಾಮಚಂದ್ರ ಖಾರ್ವಿ ಬಿಜೆಪಿಗೆ ಸೇರ್ಪಯಾದರು. ಆಶಾ ದೇವಾಡಿಗ ಪ್ರಾರ್ಥನೆ ಹಾಡಿದರು. ಬೈಂದೂರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಭಟ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.