ADVERTISEMENT

ಗೋ ಕಳ್ಳತನ ಹೈನುಗಾರಿಕೆಗೆ ಆತಂಕ:ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 7:14 IST
Last Updated 21 ಸೆಪ್ಟೆಂಬರ್ 2017, 7:14 IST

ಕಾವಡಿ(ಬ್ರಹ್ಮಾವರ): ‘ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಹಾಲು ಉತ್ಪಾದನೆಯಲ್ಲಿ ವರ್ಷದಿಂದ ವರ್ಷಕ್ಕೆ ಮಹತ್ವದ ಪ್ರಗತಿ ಸಾಧಿಸುತ್ತಿದೆ. ಆದರೆ ಕೊಟ್ಟಿಗೆಗೆ ನುಗ್ಗಿ ಗೋವು ಕಳ್ಳತನ ನಡೆಸುವ ದುಷ್ಕೃತ್ಯದಿಂದ ಹೈನುಗಾರರರು ಹೈನುಗಾರಿಕೆಯಿಂದ ದೂರವಾಗುವ ಆತಂಕವಿದೆ’ ಎಂದು ಮಂಗಳೂರು ದ.ಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ್ ಹೆಗ್ಡೆ ಹೇಳಿದರು.

ಕಾವಡಿಯಲ್ಲಿ ನಡೆದ ಈಚೆಗೆ ಕಾವಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನವೀಕೃತ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಗೋವು ಕಳ್ಳತನ ನಿಯಂತ್ರಿಸುವಂತೆ ಎರಡೂ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈಗಾಗಲೇ ಲಿಖಿತ ಮನವಿ ಸಲ್ಲಿಸಿದ್ದೇವೆ. ಇಲಾಖೆ ಕ್ರಮಕೈಗೊಳ್ಳಬೇಕಿದೆ’ ಎಂದರು. ‘ರಾಜ್ಯದ ಎಲ್ಲ ಒಕ್ಕೂಟಗಳಿಗಿಂತ ಅತೀ ಹೆಚ್ಚು ದರವನ್ನು ದ.ಕ ಹಾಲು ಉತ್ಪಾದಕರ ಒಕ್ಕೂಟ ರೈತರಿಗೆ ನೀಡುತ್ತಿದೆ’ ಎಂದು ಹೇಳಿದರು.

ಮುಖಂಡ ಕೆ.ಜಯಪ್ರಕಾಸ ಹೆಗ್ಡೆ ಮಾತನಾಡಿ, ‘ಹೈನುಗಾರಿಕೆಯಿಂದ ಇಂದು ಒಂದು ಕುಟುಂಬ ಸಂಪೂರ್ಣವಾಗಿ ನಿರ್ವಹಣೆಯಾಗುತ್ತಿದೆ. ಜನರು ಕೃಷಿಯಿಂದ ವಿಮುಖವಾಗುತ್ತಿರುವುದು ಹೈನುಗಾರಿಕೆಗೆ ಹೊಡೆತ ಬೀಳುತ್ತಿದೆ. ಈ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ’ ಎಂದರು.

ADVERTISEMENT

ಸಂಘದ ಅಧ್ಯಕ್ಷ ಕೆ.ಉಲ್ಲಾಸ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷರುಗಳು ಮತ್ತು ಭಾರ ಎತ್ತುವ ಸ್ಪರ್ಧೆಯಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಕೆ.ಅಶೋಕ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಸಹಕಾರಿ ಯೂನಿಯನ್ ಅಧ್ಯಕ್ಷ ಕೆ.ಕಿಶನ್ ಹೆಗ್ಡೆ, ವಡ್ಡರ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮ, ದ.ಕ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಅಶೋಕ ಕುಮಾರ್ ಶೆಟ್ಟಿ, ಜಾನಕಿ ಹಂದೆ, ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ, ಉಪ ವ್ಯವಸ್ಥಾಪಕ ಡಾ.ಮನೋಹರ್ ಕೆ, ಸಹಾಯಕ ವ್ಯವಸ್ಥಾಪಕ ಫಣಿಧರ ಉಡುಪ, ತಾಲ್ಲೂಕು ಪಂಚಾಯಿತಿ ಸದಸ್ಯ ಗುಂಡು ಶೆಟ್ಟಿ, ಉಪಾಧ್ಯಕ್ಷೆ ಲೀಲಾವತಿ ಶೆಟ್ಟಿ, ಲೆಕ್ಕಪತ್ರ ಪರಿಶೋಧಕ ಕೆ.ಪದ್ಮನಾಭ ಕಾಂಚನ್, ಕಾವಡಿ ಶಾಲೆಯ ಮುಖ್ಯ ಶಿಕ್ಷಕಿ ಜಯಂತಿ, ಸಂಘದ ನಿರ್ದೇಶಕ ಮಂಜುನಾಥ ಹೆಬ್ಬಾರ್, ಕೆ.ವರದರಾಜ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.