ADVERTISEMENT

ಜನರ ಬಳಿಗೆ ಆಡಳಿತ ಕೊಂಡೊಯ್ಯಲು ಜನತಾ ದರ್ಶನ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 9:09 IST
Last Updated 25 ನವೆಂಬರ್ 2014, 9:09 IST
ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನ ಕೋಯಾಕುಟ್ಟಿ ಹಾಲ್‌ನಲ್ಲಿ ಸೋಮವಾರ ನಡೆದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿದರು. ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾಧಿಕಾರಿ ಡಾ.ಆರ್‌ ವಿಶಾಲ್‌ ಮುಂತಾದವರಿದ್ದರು.
ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನ ಕೋಯಾಕುಟ್ಟಿ ಹಾಲ್‌ನಲ್ಲಿ ಸೋಮವಾರ ನಡೆದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿದರು. ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾಧಿಕಾರಿ ಡಾ.ಆರ್‌ ವಿಶಾಲ್‌ ಮುಂತಾದವರಿದ್ದರು.   

ಕುಂದಾಪುರ: ಸಾಮಾನ್ಯ ಜನರ ಬಳಿಗೆ ಆಡಳಿತ ವ್ಯವಸ್ಥೆಯನ್ನು ತೆಗೆದುಕೊಂಡು ಹೋಗಿ ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಎನ್ನುವ ಉದ್ದೇಶದಿಂದ ಜನತಾ ದರ್ಶನ ನಡೆಸುತ್ತಿದ್ದು, ಈ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.

ನಗರದ ಕೋಯಕುಟ್ಟಿ ಹಾಲ್‌ನಲ್ಲಿ ಸೋಮ­ವಾರ ನಡೆದ ಜನತಾ ದರ್ಶನ ಕಾರ್ಯಕ್ರ­ಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಇತರ ಜಿಲ್ಲೆಗಳಿಗೂ ಹಾಗೂ ಕರಾವಳಿ ಜಿಲ್ಲೆಗಳಿಗೂ ಇರುವ ಕಂದಾಯ ಸಮಸ್ಯೆಗಳು ವಿಭಿನ್ನವಾಗಿದ್ದು, ಇದನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಇಲ್ಲಿನ ಸಮಸ್ಯೆಯ ಪರಿಹಾರಕ್ಕಾಗಿ ಗ್ರಾಮ ಮಟ್ಟದಲ್ಲಿ ಕಂದಾಯ ಅದಾಲತ್‌ಗಳನ್ನು ನಡೆಸಲಾಗುತ್ತಿದೆ. ಸರ್ವೇಯರ್‌ ನೇಮಕದಿಂದ ಬಾಕಿ ಉಳಿದಿರುವ ಅರ್ಜಿಗಳ ವಿಲೆವಾರಿಗಾಗಿ ಕ್ರಮ ಕೈಗೊಂಡಿದ್ದು, ಖಾಲಿ ಉಳಿದಿರುವ ಸರ್ವೇಯರ್‌ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಶಾಲಾ ಮಟ್ಟದಲ್ಲಿ ನೀಡುವುದರಿಂದ ತಾಲ್ಲೂಕು ಕಚೇರಿಯ ಒತ್ತಡಗಳನ್ನು ಕಡಿಮೆ ಮಾಡಲಾಗಿದೆ ಎಂದರು.

ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅವರು ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಮಂಜೂರಾಗಿದ್ದರೂ, ಎಂಜಿನಿಯರ್‌ ವಿಭಾಗದ ಅಧಿಕಾರಿಗಳ ಕೊರತೆಯಿಂದ ಅನುದಾನ ವಾಪಾಸಾಗುವ ಆತಂಕವಿದೆ ಹೇಳಿದರು. ಸರ್ಕಾರದ ವಿವಿಧ ಯೋಜನೆಯ ಫಲಾನು­ಭವಿಗಳಿಗೆ ಇದೆ ಸಂದರ್ಭದಲ್ಲಿ ಚೆಕ್‌ ವಿತರಿಸಲಾ­ಯಿತು. ಸಚಿವರಿಗೆ ಮನವಿ ಅರ್ಪಿಸಿ ಮಾತನಾ­ಡಿದ ಬಸ್ರೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಕಾಸ ಹೆಗ್ಡೆ, ಡಿಸೆಂಬರ್‌ ಅಂತ್ಯದ ಒಳಗೆ ವರಾಹಿ ಕಾಲುವೆಗಳಲ್ಲಿ ನೀರು ಹರಿಸದೆ ಇದ್ದಲ್ಲಿ ರೈತರು ಹಾಗೂ ಸಮಾನಮನಸ್ಕರು ಉಗ್ರ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.

ಪಶ್ಚಿಮಘಟ್ಟದ ತಪ್ಪಲು ಪ್ರದೇಶವಾದ ದೇವರಬಾಳು ಸಮೀಪದಲ್ಲಿ ಇರುವ ಸುಮಾರು 24 ಕುಟುಂಬಗಳು ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಕಂದಾಯ ಇಲಾಖೆಯ ವಿಳಂಭ ನೀತಿಯಿಂದಾಗಿ ಅತಂತ್ರ ಸ್ಥಿತಿಯಲ್ಲಿ ಇದ್ದಾರೆ ಎನ್ನುವ ವಿಚಾರಗಳು ಸೇರಿ 19 ಅರ್ಜಿಗಳ ವಿಚಾರಣೆ ನಡೆಯಿತು.

ಜನತಾ ದರ್ಶನ ಕಾರ್ಯಕ್ರಮಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಜನರು ಬಂದಿದ್ದರೂ, ಸ್ಥಳಾವಕಾಶ ಕಡಿಮೆ ಇದ್ದುದರಿಂದ ಹೆಚ್ಚಿನವರು ಹೊರಗೆ ಉಳಿಯು­ವಂ­ತಾಯಿತು. ಜನಪ್ರತಿನಿಧಿಗಳು ಹಾಗೂ ಮುಖಂ­ಡರುಗಳಿಗೆ ಮಾತ್ರ ಪ್ರಶ್ನೆ ಕೇಳುವ ಅವಕಾಶವಾಯ್ತು ಎನ್ನುವ ಗೊಣಗಾಟಗಳು ಕೇಳಿ ಬಂದವು.

ತಾ.ಪಂ.ಅಧ್ಯಕ್ಷ ಭಾಸ್ಕರ ಬಿಲ್ಲವ, ಜಿಲ್ಲಾಧಿ­ಕಾರಿ ಡಾ.ಆರ್.ವಿಶಾಲ್, ಜಿ.ಪಂ.­ಕಾರ್ಯ­ನಿರ್ವಹಣಾಧಿಕಾರಿ ಕನಗವಲ್ಲಿ, ಕುಂದಾಪುರ ಪುರಸಭೆ ಅಧ್ಯಕ್ಷೆ ಕಲಾವತಿ, ಜಿ.ಪಂ.ಸದಸ್ಯ ಅನಂತ ಮೊವಾಡಿ, ಕಂದಾಯ ಉಪವಿಭಾಗದ ಸಹಾಯಕ ಆಯುಕ್ತೆ ಚಾರುಲತಾ ಸೋಮಲ್, ಡಿಎಫ್‌ಓ ರವಿಶಂಕರ್ ಇದ್ದರು.

ರಾಜೇಶ್ವರಿ ಪ್ರಾರ್ಥಿಸಿದರು, ಕುಂದಾಪುರ ತಹಸೀಲ್ದಾರ್‌ ಗಾಯತ್ರಿ ನಾಯಕ್ ಸ್ವಾಗತಿಸಿದರು, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.