ADVERTISEMENT

ಜಲಮೂಲ ರಕ್ಷಣೆಗೆ ಕೆರೆ ಅಭಿವೃದ್ಧಿ

ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಮೇ 2017, 11:21 IST
Last Updated 12 ಮೇ 2017, 11:21 IST
ಜಲಮೂಲ ರಕ್ಷಣೆಗೆ ಕೆರೆ ಅಭಿವೃದ್ಧಿ
ಜಲಮೂಲ ರಕ್ಷಣೆಗೆ ಕೆರೆ ಅಭಿವೃದ್ಧಿ   
ಉಡುಪಿ: ನಗರದಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸ್ಥಳೀಯ ನೀರಿನ ಮೂಲಗಳನ್ನು ಸಂರಕ್ಷಿಸಲಾ ಗುವುದು ಎಂದು ಮೀನಗಾರಿಕೆ, ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
 
ಸುಬ್ರಹ್ಮಣ್ಯನಗರ ವಾರ್ಡ್‌ನ ಲಿಂಗೋಟಿಗುಡ್ಡೆ ಕೆರೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ಮಾಡಿ ಅವರು ಮಾತನಾಡಿದರು. ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
 
ಹಿಂದಿನ ಕಾಲದಲ್ಲಿ ರಾಜರು ಕೆರೆಗಳನ್ನು ಕಟ್ಟುವ ಮೂಲಕ ನೀರು ಲಭ್ಯವಾಗುವಂತೆ ಮಾಡುತ್ತಿದ್ದರು. ಆದರೆ ಈಗ ಕೆರೆಗಳನ್ನು ಮುಚ್ಚುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಅವರು ಹೇಳಿದರು.
 
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಸಂಗ್ರಹಿಸುವ ಕೆರೆ ಅಭಿವೃದ್ಧಿ ಶುಲ್ಕವನ್ನು ಈ ಕಾಮಗಾರಿಗಳಿಗೆ ವಿನಿಯೋಗಿಸಲಾಗುತ್ತದೆ. ಈಗಾಗಲೇ ₹5 ಕೋಟಿಯನ್ನು ಇದಕ್ಕಾಗಿ ವೆಚ್ಚ ಮಾಡಲಾಗುತ್ತಿದೆ. ಅಲ್ಲದೆ ಹೆಚ್ಚುವರಿಯಾಗಿ ಇನ್ನೂ ₹2 ಕೋಟಿಯನ್ನು ಸಹ ಕೆರೆಗಳನ್ನು ಪುನರುಜ್ಜೀವನಗೊಳಿಸಲು ವಿನಿಯೋಗಿಸಲಾಗುತ್ತದೆ ಎಂದರು.
 
ನೀರಿನ ಕೊರತೆ ಇರುವ ಬಡಾವಣೆ ಗಳಿಗೆ ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ನೀರಿನ ಮೂಲ ಗುರುತಿಸಿ ವಶಕ್ಕೆ ಪಡೆಯಲಾಗಿದೆ. ಆದರೆ ನಲ್ಲಿಯಲ್ಲಿ ಪೂರೈಕೆ ಮಾಡುವಷ್ಟು ನೀರನ್ನು ಟ್ಯಾಂಕರ್ ಮೂಲಕ ನೀಡಲಾಗದು. ಮಳೆ ಬಂದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
 
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಡುಪಿ ನಗರಾ ಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹ ಮೂರ್ತಿ, ಪ್ರದೀಪ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.