ADVERTISEMENT

ಠೇವಣಿ ಕಳೆದುಕೊಂಡ ಪಕ್ಷದ ಜತೆ ಕಾಂಗ್ರೆಸ್‌ ಮೈತ್ರಿ

ಕರಾಳ ದಿನಾಚರಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 25 ಮೇ 2018, 4:33 IST
Last Updated 25 ಮೇ 2018, 4:33 IST

ಉಡುಪಿ: ರಾಜ್ಯದಲ್ಲಿ 38 ಸ್ಥಾನ ಪಡೆದುಕೊಂಡ ಜೆಡಿಎಸ್‌ ನೊಂದಿಗೆ 78 ಸ್ಥಾನ ಪಡೆದಿರುವ ಕಾಂಗ್ರೆಸ್‌ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದೆ ಎಂದು ಶಾಸಕ ಕೆ.ರಘುಪತಿ ಭಟ್‌ ವ್ಯಂಗ್ಯವಾಡಿದರು.

ಬಿಜೆಪಿ ಕಚೇರಿ ಎದುರು ಬುಧವಾರ ನಡೆದ ಕರಾಳ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ 104 ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಮತದಾರರು ಆಡಳಿತ ನಡೆಸಲು ಜನಾದೇಶ ನೀಡಿದ್ದರು. ಆದರೆ, ಸಂಪೂರ್ಣ ಬಹುಮತ ಸಿಗದೆ ಯಡ್ಡಿಯೂರಪ್ಪ ಅವರು ಬಹುಮತ ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ನಾಯಕರು ತಮ್ಮ ಪಕ್ಷದ ಶಾಸಕರನ್ನು ಬಂಧನದಲ್ಲಿಟ್ಟು ಭಯದ ವಾತಾವರಣ ನಿರ್ಮಾಣ ಮಾಡಿದರು. ಪಕ್ಷದ ನಡವಳಿಕೆಯಿಂದ ಹಲವರು ಬೇಸತ್ತಿದ್ದಾರೆ. ಮುಂದೆ ರಾಜ್ಯದಲ್ಲಿ ಶೀಘ್ರ ಚುನಾವಣೆ ನಡೆಯುವ ಸಾಧ್ಯತೆ ಇದೆ’ ಎಂದು ಹೇಳಿದರು.

ADVERTISEMENT

ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ವಚನ ಭ್ರಷ್ಟರಾಗಿದ್ದಾರೆ. ಚುನಾವಣೆಯ ಪೂರ್ವದಲ್ಲಿ ಮುಖ್ಯಮಂತ್ರಿಯಾದರೆ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇರುವ ರೈತರ ಸಾಲ ಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಈಗ, ಪಕ್ಷಕ್ಕೆ ಪೂರ್ಣ ಬಹುಮತ ಬಂದರೆ ಮಾತ್ರ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದೆ ಎಂದು ಮಾತು ಬದಲಿಸಿದ್ದಾರೆ’ ಎಂದು ಟೀಕಿಸಿದರು.

ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಕರಾವಳಿ ಸೇರಿದಂತೆ ಹಲವೆಡೆ ಠೇವಣಿ ಕಳೆದುಕೊಂಡಿರುವ ಜೆಡಿಎಸ್‌ ಪಕ್ಷದೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಚುನಾವಣೆಗೂ ಮುನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗೋದಿಲ್ಲ’ ಎಂದಿದ್ದರು. ಈಗ ಜನಾದೇಶವನ್ನು ತಿರಸ್ಕರಿಸಿ ಅದೇ ಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸಿರುವುದು ಖಂಡನೀಯ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಹೆದರಿ ಕಾಂಗ್ರೆಸ್‌, ಜೆಡಿಎಸ್‌ ಇತರ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಒಟ್ಟಾಗಿವೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿ ವಿರೋಧಿ ಪಕ್ಷಗಳ ನಾಯಕರು ಭಾಗವಹಿಸಿರುವುದು ಇದಕ್ಕೆ ಸಾಕ್ಷಿ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ್‌ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಧ್ಯಕ್ಷ ಪ್ರಭಾಕರ  ಪೂಜಾರಿ, ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್‌, ಮುಖಂಡರಾದ ಮಹೇಶ್‌ ಠಾಕೂರ್, ಅಚ್ಚು ಶೆಟ್ಟಿ, ರಜಿನಿ, ಖುಷಿ, ಮಂಜುಳ ಪ್ರಸಾದ್‌, ರಶ್ಮಿ, ತಾರಾ, ರಾಘವೇಂದ್ರ ಕಿಣಿ ಅವರೂ ಇದ್ದರು.‌

‘ಆತ್ಮಸಾಕ್ಷಿಯಂತೆ ನಡೆದುಕೊಳ್ಳಲು ಬಿಡಲಿಲ್ಲ’

ಯಡ್ಡಿಯೂರಪ್ಪ ಅವರ ನೇತೃತ್ವದದಲ್ಲಿ ಬಿಜೆಪಿ ಸರ್ಕಾರ ರಚಿಸಲು ಸಾಕಷ್ಟು ಪ್ರಯತ್ನ ನಡೆಸಿತು. ಇದನ್ನು ವಿರೋಧ ಪಕ್ಷಗಳು ಕುದುರೆ ವ್ಯಾಪಾರ ಎಂದು ಬಿಂಬಿಸಿದರು. ಕೊನೆಗೆ ನಾವು ಕತ್ತೆಗಳನ್ನೂ ಖರೀದಿ ಮಾಡಲಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರನ್ನು ಆತ್ಮ ಸಾಕ್ಷಿಯಂತೆ ನಡೆದುಕೊಳ್ಳಲು ಅವರ ನಾಯಕರು ಬಿಡಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಟೀಕಿಸಿದರು.

**
ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಪವಿತ್ರ ಮೈತ್ರಿ ಒಟ್ಟಾಗಿ ಆರು ತಿಂಗಳು ಸರ್ಕಾರ ನಡೆಸುವುದೇ ಹೆಚ್ಚು ಎಂದು ಜನರು ವ್ಯಂಗ್ಯವಾಡುತ್ತಿದ್ದಾರೆ
ಕೆ.ರಘುಪತಿಭಟ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.