ADVERTISEMENT

ತರಬೇತಿ – ನೇಮಕಾತಿ ಕೇಂದ್ರ ಶೀಘ್ರ: ಸಚಿವ

​ಪ್ರಜಾವಾಣಿ ವಾರ್ತೆ
Published 20 ಮೇ 2017, 5:05 IST
Last Updated 20 ಮೇ 2017, 5:05 IST

ಉಡುಪಿ: ಜಿಲ್ಲೆಯಲ್ಲಿ ಯುವ ಜನತೆಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸಿಕೊಡುವ ಸಲುವಾಗಿ ಶೀಘ್ರದಲ್ಲಿಯೇ ಉದ್ಯೋಗ ತರಬೇತಿ ಹಾಗೂ ನೇಮಕಾತಿ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ನಗರದ ಅಜ್ಜರಕಾಡಿನ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೃತ್ತಿ ಆಧಾರಿತ ಮತ್ತು ಬಿಪಿಒ ಸೇರಿದಂತೆ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ತರಬೇತಿ ನೀಡಿ, ನೇಮಕಾತಿ ಒದಗಿಸುವ ಕೇಂದ್ರವನ್ನು ಖಾಸಗಿ ಸಂಸ್ಥೆ ಮ್ಯಾಂಡಮಸ್‌ನ ಸಹಯೋಗದಲ್ಲಿ 3 ತಿಂಗಳೊಳಗೆ ಜಿಲ್ಲೆಯಲ್ಲಿ ಆರಂಭಿಸಲು ಚಿಂತಿಸಲಾಗಿದೆ ಎಂದರು.

ADVERTISEMENT

ಉಡುಪಿ ಜಿಲ್ಲೆಯು ಶೈಕ್ಷಣಿಕವಾಗಿ ಇಡೀ ದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಅಲ್ಲದೆ, ಇಲ್ಲಿ ಮಾನವ ಸಂಪನ್ಮೂಲವೂ ಅತ್ಯುತ್ತಮ ಮಟ್ಟದಲ್ಲಿದೆ. ಹಾಗಾಗಿ ಯುವಕರಿಗೆ ಸೂಕ್ತ ತರಬೇತಿ ಮತ್ತು ಉದ್ಯೋಗಾವಕಾಶ ಒದಗಿಸಲು ಉದ್ಯೋಗ ತರಬೇತಿ ಕೇಂದ್ರ ಆರಂಭಿಸಿ, ಈ ಕೇಂದ್ರದಲ್ಲಿ ನೊಂದಾಯಿಸಿದ ಪ್ರತಿಯೊಬ್ಬರಿಗೂ ಸೂಕ್ತ ತರಬೇತಿ ಮತ್ತು ಉದ್ಯೋಗ ದೊರಕಿಸುವುದರ  ಜೊತೆಗೆ ಉದ್ಯೋಗ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯನ್ನು ಇಡೀ ರಾಜ್ಯದಲ್ಲಿ ಮಾದರಿ ಜಿಲ್ಲೆಯನ್ನಾಗಿ ಮಾಡಲಾಗುವುದು ಎಂದು ಅವರು ಹೇಳಿದರು. ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವೈದ್ಯರು, ವಿ.ಎ, ಪಿಡಿಓ, ಪ್ಯಾರಾ ಮೆಡಿಕಲ್‌ ಸಿಬ್ಬಂದಿ, ಭೂ ಮಾಪಕರು, ಪೊಲೀಸ್‌, ಶಿಕ್ಷಕರು ಸೇರಿದಂತೆ 1 ಲಕ್ಷಕ್ಕೂ ಅಧಿಕ ಹುದೆಗಳನ್ನು ಭರ್ತಿಗೊಳಿಸಲಾಗಿದೆ. ಯುವ ಜನತೆ ಸರ್ಕಾರಿ ಉದ್ಯೋಗಕ್ಕೆ ಕಾಯದೇ ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಲು ಪ್ರಯತ್ನಿಸಬೇಕು. ಅದಕ್ಕಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಇದರ ಪ್ರಯೋಜನವನ್ನು ಯುವಜನತೆ ಪಡೆದುಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.

ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಮ್ಯಾಂಡಮಸ್‌ ಸಂಸ್ಥೆಯ ಎಂಡಿ ಕಿಶನ್‌ ಉಪಸ್ಥಿತರಿದ್ದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು, ಪ್ರಶಾಂತ್‌ ಹಾವಂಜೆ ನಿರೂಪಿಸಿದರು.

**

ಯುವಶಕ್ತಿ ದೇಶದ ಅತ್ಯಂತ ದೊಡ್ಡ ಶಕ್ತಿ. ಹಾಗಾಗಿ ಯುವಜನತೆಗೆ ಸೂಕ್ತ ಉದ್ಯೋಗ ಒದಗಿಸದೆ ಅವರನ್ನು ಅನುತ್ಪಾದಕರನ್ನಾಗಿ ಮಾಡಿದರೆ, ಅದು ಇಡೀ ಸಮಾಜ ಹಾಗೂ ದೇಶಕ್ಕೆ ದೊಡ್ಡ ನಷ್ಟ.
-ಪ್ರಮೋದ್‌ ಮಧ್ವರಾಜ್‌, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.