ADVERTISEMENT

ತಾಲ್ಲೂಕು ತುಳು ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 8:49 IST
Last Updated 10 ಸೆಪ್ಟೆಂಬರ್ 2017, 8:49 IST

ಉಡುಪಿ: ತುಳು ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದ ತುಳು ಸಾಹಿತ್ಯ ಸಮ್ಮೇಳನ ನಡೆಸುವ ಚಿಂತನೆ ಇದೆ ಎಂದು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ ಭಂಡಾರಿ ಹೇಳಿದರು.

ತುಳುಕೂಟ ಉಡುಪಿ ಮತ್ತು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತುಳು ಸಂಘ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಸೋನದ ಸೇಸೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿ ತಾಲ್ಲೂಕು ಮಟ್ಟದಲ್ಲಿ ತುಳು ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಉಪ ಸಮಿತಿ ರಚಿಸಿಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಗ್ರಾಮೀಣ ಭಾಗದ ತುಳು ಸಾಹಿತಿ, ವಿದ್ವಾಂಸರನ್ನು ಒಂದೆಡೆ ಸೇರಿಸಿ ಮುಂದಿನ ದಿನದಲ್ಲಿ ಜಿಲ್ಲಾ ಮಟ್ಟದ ಸಮ್ಮೇಳನ ಮಾಡುವ ಯೋಜನೆಯೂ ಇದೆ. ಈ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿ ಕಾರ್ಯೋನ್ಮುಖವಾಗಬೇಕು ಎಂದರು.

ADVERTISEMENT

ತುಳು ಭಾಷೆಯ ಬಗ್ಗೆ ಇದ್ದ ಕೀಳರಿಮೆ ದೂರವಾಗಿದೆ. ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 36 ಶಾಲೆಗಳಲ್ಲಿ 5ರಿಂದ 10ನೇ ತರಗತಿ ವರೆಗೆ ತುಳು ಭಾಷೆಯನ್ನು ಒಂದು ವಿಷಯವಾಗಿ ಕಲಿಸಲಾಗುತ್ತಿದೆ. ಮುಂದಿನ ದಿನದಲ್ಲಿ ಇನ್ನಷ್ಟು ಶಾಲೆಗೆ ವಿಸ್ತರಿಸಲಾಗುತ್ತದೆ ಎಂದು ಹೇಳಿದರು.

ತುಳುನಾಡ ಗರಡಿ ಮತ್ತು ದೈವಸ್ಥಾನದಲ್ಲಿ ಅಪಾರ ವಿದ್ವಾತ್ ಇದೆ. ಅದನ್ನು ಹೊರತರುವ ಪ್ರಯತ್ನ ನಡೆಯಬೇಕು. ಮಠ ಮಂದಿಗಳಿಂದ ನಮ್ಮ ತುಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮಿನ್ ಹೇಳಿದರು.

ತುಳುಕೂಟ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯದರ್ಶಿ ಗಂಗಾಧರ ಕಿದಿಯೂರು, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ವೈ.ಎನ್. ಶೆಟ್ಟಿ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿ ಪ್ರಾಶುಂಪಾಲ ಜಗದೀಶ್ ಕುಮಾರ್, ಉದ್ಯಮಿ ಉದಯ ಶೆಟ್ಟಿ ಉಪಸ್ಥಿತರಿದ್ದರು. ಸೋನದ ಸೇಸ ಸಂಚಾಲಕ ರತ್ನಾಕರ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.