ADVERTISEMENT

ದಲಿತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 9:01 IST
Last Updated 3 ಜುಲೈ 2017, 9:01 IST

ಕುಂದಾಪುರ : ‘ಸಿಂದಗಿ ತಾಲ್ಲೂಕಿನ ಹಾಳಗುಂಡಕನಾಳ ಗ್ರಾಮದಲ್ಲಿ ದಲಿತ ಸಮುದಾಯದ ತಂದೆ ಹಾಗೂ ಮಗನನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡುವ ಮೂಲಕ ಮತಾಂಧ ಶಕ್ತಿಗಳು ಅಮಾನವೀಯ ಮುಖವನ್ನು ತೋರಿದ್ದಾರೆ’ ಎಂದು  ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಮುಖಂಡ ಜಯನ್ ಮಲ್ಪೆ ಆಕ್ರೋಶ ವ್ಯಕ್ತಪಡಿಸಿದರು.

ಸಿಂದಗಿ ತಾಲ್ಲೂಕಿನ ಹಾಳಗುಂಡಕನಾಳ ಗ್ರಾಮದಲ್ಲಿ ನಡೆದ ದಲಿತರ ಮೇಲಿನ ಹಲ್ಲೆ ಖಂಡಿಸಿ ಇಲ್ಲಿನ ಶಾಸ್ತ್ರಿ ಸರ್ಕಲ್‌ನಲ್ಲಿ ಶನಿವಾರ  ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘ಉಡುಪಿಯ ಪೇಜಾವರ ಮಠದಲ್ಲಿ ನಡೆದ ಇಫ್ತಾರ್ ಕೂಟವನ್ನು ವಿರೋಧಿಸುವ ಪ್ರಗತಿಪರರು ಹಾಗೂ ಮೊವಾಡಿಯ ದಲಿತರ ಮೇಲೆ ನಡೆದ ಹಲ್ಲೆ ಖಂಡಿಸುವ ಸೌಹಾರ್ದ ಸಂಘಟನೆಗಳು ಸಿಂದಗಿಯ ದಲಿತರ ಮೇಲಾದ ಅಮಾನವೀಯ ಘಟನೆಯ ಕುರಿತು ಯಾಕೆ ಧ್ವನಿ ಎತ್ತುತ್ತಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

‘ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಆರಂಭವಾಗಿರುವ ದಲಿತರ ಮೇಲಿನ ಹಲ್ಲೆ, ದೌರ್ಜನ್ಯಗಳು ಇನ್ನೂ ಎಗ್ಗಿಲ್ಲದೆ ನಡೆಯುತ್ತಿವೆ. ಅನ್ಯ ಧರ್ಮದ ಮಕ್ಕಳು ಪರಸ್ಪರ ಪ್ರೀತಿಸುವುದು ತಪ್ಪಾ ’ ಎಂದು ಪ್ರಶ್ನಿಸಿದ ಅವರು ಸಿಂದಗಿ ಘಟನೆಯಲ್ಲಿ ಭಾಗಿಯಾದ ಆರೋಪಿಗಳನ್ನು ಜಿಲ್ಲೆಯಿಂದ ಕೂಡಲೇ ಗಡೀಪಾರು ಮಾಡಬೇಕು ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಹ ಸಂಚಾಲಕ ಮಂಜುನಾಥ ಗಿಳಿಯಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಂದಾಪುರ ತಾಲ್ಲೂಕು ಸಂಚಾಲಕ ರಾಜು ಬೆಟ್ಟಿನಮನೆ, ವಾಸುದೇವ ಮುದೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.