ADVERTISEMENT

ನಿವೇಶನ ಮಂಜೂರಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಮೇ 2016, 5:17 IST
Last Updated 6 ಮೇ 2016, 5:17 IST

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯ ನಿವೇಶನ ರಹಿತ ಬಡಜನರಿಗೆ ನಿವೇಶನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ತಾಲ್ಲೂಕು ಸಮಿತಿಯ ನೇತೃತ್ವದಲ್ಲಿ ನಿವೇಶನ ರಹಿತರು ನಗರಸಭೆಯ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಮನೆ ನಿವೇಶನಕ್ಕಾಗಿ ಆಗ್ರಹಿಸಿ ಸಲ್ಲಿಸಿದ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ, ನಿವೇಶನ ರಹಿತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಬೇಕು. ಅಲ್ಲದೆ, ಈಗಾಗಲೇ ಗುರುತಿಸಿರುವ ಸರ್ಕಾರಿ ಜಮೀನಿನ ಹಕ್ಕುಪತ್ರವನ್ನು ನಿವೇಶನ ರಹಿತರಿಗೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನಿವೇಶನ ರಹಿತರಿಗೆ ಎರಡು ವರ್ಷದೊಳಗೆ ಹಂಚಬೇಕು ಎಂಬ ಷರತ್ತಿನೊಂದಿಗೆ ಕುಂದಾಪುರ ಉಪ ವಿಭಾಗಾಧಿಕಾರಿ ಅವರು 2013ರಲ್ಲಿ ಪುತ್ತೂರು ಗ್ರಾಮದಲ್ಲಿ 1.91 ಎಕರೆ ಜಮೀನು ಕಾಯ್ದಿರಿಸಿದ್ದಾರೆ. ಆದರೆ, ಜಮೀನನ್ನು ಕಾಯ್ದಿರಿಸಿ ಎರಡು ವರ್ಷಗಳು ಕಳೆದರೂ, ಅರ್ಹ ನಿವೇಶನ ರಹಿತ ಫಲಾನುಭವಿಗಳಿಗೆ ನಗರಸಭೆ ನಿವೇಶನ ಹಂಚಿಕೆ ಮಾಡದ ನಗರಸಭೆ ಅನ್ಯಾಯ ಎಸಗಿದೆ ಎಂದು ದೂರಿದರು.

ನಗರಸಭೆ ವ್ಯಾಪ್ತಿಯಲ್ಲಿ ದಾಖಲಾದ ನಿವೇಶನ ರಹಿತರ ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ನಿವೇಶನ ರಹಿತರ ಪಟ್ಟಿಯಂತೆ ಫಲಾನುಭವಿಗಳನ್ನು ಆಯ್ಕೆ ಮಾಡಲು ನಗರಸಭೆಯಿಂದ ಒಟ್ಟು 2,461 ಅರ್ಜಿಗಳನ್ನು ಉಡುಪಿ ತಹಶೀಲ್ದಾರ್‌ ಅವರಿಗೆ ಕಳುಹಿಸಿ ಒಂದು ವರ್ಷವಾದರೂ, ಈ ವರೆಗೆ ನಗರಸಭಾ ವ್ಯಾಪ್ತಿಯ ಕೇವಲ 457 ಅರ್ಜಿಗಳನ್ನು ಮಾತ್ರ ಪ್ರಥಮ ಹಂತದ ಎ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಆದರೆ, ಉಳಿದ ನಿವೇಶನ ರಹಿತರ ಅಂತಿಮ ಪಟ್ಟಿಯನ್ನು ಇನ್ನೂ ಸಿದ್ಧಪಡಿಸಿಲ್ಲ. ಹಾಗಾಗಿ ಬಾಕಿ ಉಳಿದಿರುವ ಅರ್ಜಿಗಳನ್ನು ಶೀಘ್ರವೇ ಅಂತಿಮ ಪಟ್ಟಿಗೆ ಸೇರಿಸಲು ಕ್ರಮಕೈಗೊಳ್ಳಬೇಕು. ನಗರಸಭಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅತಿಕ್ರಮಿಸಿಕೊಂಡಿರುವ ಸರ್ಕಾರಿ ಭೂಮಿಯನ್ನು ಕೂಡಲೇ ತೆರವುಗೊಳಿಸಿ, ನಿವೇಶನರಹಿತ ಬಡಜನರಿಗೆ ಹಂಚಬೇಕು ಎಂದು ಆಗ್ರಹಿಸಿದರು.

ಸಮಿತಿಯ ಅಧ್ಯಕ್ಷ ಎಚ್‌. ವಿಠಲ ಪೂಜಾರಿ, ಕೋಶಾಧಿಕಾರಿ ಉಮೇಶ್‌ ಕುಂದರ್‌, ರಾಜ್ಯ ಸಮಿತಿ ಸದಸ್ಯ ಕವಿರಾಜ್‌, ಸಿಐಟಿಯು ಜಿಲ್ಲಾಧ್ಯಕ್ಷ ಕೆ. ಶಂಕರ, ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ನಳಿನಿ ಮತ್ತಿತರರು ಇದ್ದರು.

ಪೌರಾಯುಕ್ತರ ಸ್ಪಷ್ಟನೆ
ನಗರಸಭೆಗೆ ಒಟ್ಟು 2,461 ಅರ್ಜಿಗಳು ಬಂದಿದ್ದು, ಅದರಲ್ಲಿ 299 ಅರ್ಹ ಫಲಾನುಭವಿಗಳನ್ನು ಗುರುತಿಸಿ ಕಂದಾಯ ಇಲಾಖೆ ಕಳುಹಿಸಿಕೊಡಲಾಗಿದೆ. ಅಲ್ಲಿ ಮತ್ತೆ ಪರಿಶೀಲಿಸಿದಾಗ 58 ಅರ್ಜಿಗಳು ನಕಲಿ ಎಂದು ತಿಳಿದುಬಂದಿದೆ. ಕಂದಾಯ ಇಲಾಖೆ ತೀರ್ಮಾನಿಸಿ ಅಂತಿಮವಾಗಿ ಕೊಟ್ಟಿರುವ ಪಟ್ಟಿಯ ಫಲಾನುಭವಿಗಳಿಗೆ ಅರ್ಹತೆ ಮತ್ತು ಮಾನದಂಡದ ಪ್ರಕಾರ ನಿವೇಶನವನ್ನು ಹಂಚಿಕೆ ಮಾಡಲಾಗುವುದು ಎಂದು ಪೌರಾಯುಕ್ತ ಡಿ. ಮಂಜುನಾಥಯ್ಯ ಹೇಳಿದರು.

ನಗರಸಭೆಗೆ ಶಿವಳ್ಳಿ ಗ್ರಾಮದಲ್ಲಿ 1.05 ಎಕರೆ ಭೂಮಿ ಹಾಗೂ ಪುತ್ತೂರು ಗ್ರಾಮದ ಲಿಂಗೋಟಿಗುಡ್ಡೆಯಲ್ಲಿ 1.91 ಎಕರೆ ಭೂಮಿ ಮಂಜೂರಾಗಿದ್ದು, ಹಸ್ತಾಂತರದ ಪ್ರಕ್ರಿಯೆ ಜಾರಿಯಲ್ಲಿದೆ. ಈ ಎರಡು ಜಮೀನು ನಗರಸಭೆಗೆ ಹಸ್ತಾಂತರವಾದ ಬಳಿಕ ಅರ್ಹ ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡಲಾಗುವುದು. 36 ಮಂದಿ ಹೆದ್ದಾರಿ ಸಂತ್ರಸ್ತರಿಗೆ ಪುತ್ತೂರು ಗ್ರಾಮದ ಪೊಟ್ಟುಕೆರೆಯಲ್ಲಿ ತಲಾ 2.75 ಸೆಂಟ್ಸ್‌ನಂತೆ ನಿವೇಶನ ಮಂಜೂರು ಮಾಡಿದ್ದ ಜಮೀನಿನಲ್ಲಿ ನೀರು ನಿಲ್ಲುತ್ತಿದ್ದು, ಆ ಜಾಗ ಮನೆಕಟ್ಟಲು ಯೋಗ್ಯವಾಗಿಲ್ಲ. ಹಾಗಾಗಿ ಅವರಿಗೆ ಬದಲಿಯಾಗಿ ಪೆರಂಪಳ್ಳಿಯಲ್ಲಿ 1.09 ಎಕರೆ ಭೂಮಿಯನ್ನು ಗುರುತಿಸಿದ್ದು, ಶೀಘ್ರವೇ ಹಂಚಿಕೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT