ADVERTISEMENT

ಪರಿಣಾಮಕಾರಿ ಅನುಷ್ಠಾನದಿಂದ ಯೋಜನೆ ಯಶಸ್ವಿ: ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 9:34 IST
Last Updated 3 ಸೆಪ್ಟೆಂಬರ್ 2017, 9:34 IST

ಕಾರ್ಕಳ: ಸರ್ಕಾರದಲ್ಲಿ ಸಾಕಷ್ಟು ಯೋಜನೆಗಳಿವೆ. ಆದರೆ ಅವು ಪರಿಣಾಮಕಾರಿಯಾದ ಗುರಿ ತಲುಪುವಲ್ಲಿ ಸೋಲುತ್ತವೆ. ಆದರೆ ಗ್ರಾಮಾಭಿವೃದ್ಧಿ ಯೋಜನೆ ಪರಿಣಾಮಕಾರಿ ಅನುಷ್ಠಾನದಿಂದ ಮೂಲ ಉದ್ದೇಶವನ್ನು ಪರಿಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ನಗರದ ದಾನಶಾಲೆಯ ಬಾಹುಬಲಿ ಪ್ರವಚನ ಮಂದಿರದಲ್ಲಿ ಶನಿವಾರ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಕೇಂದ್ರ ಸಮಿತಿಯ 4052 ಸ್ವಸಹಾಯ ಸಂಘಗಳನ್ನು ಒಳಗೊಂಡ 143 ಒಕ್ಕೂಟಗಳ ಪದಗ್ರಹಣ ಹಾಗೂ ಲಾಭಾಂಶ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಾವು ಎಂಬ ಪರಿಕ್ಪಲನೆಯಲ್ಲಿ ಮನುಷ್ಯ ಬೆಳೆಯಬೇಕು.

ನಾವು ಎನ್ನುವ ಮನಃಸ್ಥಿತಿಯಲ್ಲಿ ಮಾಡಿದರೆ ಅದಕ್ಕೆ ಅರ್ಥ ಬರುತ್ತದೆ. ಸ್ವಸಹಾಯ ಸಂಘಗಳೂ ನಾವು ಎನ್ನುವ ಅರ್ಥದಲ್ಲಿಯೇ ಬೆಳೆದಿವೆ ಎಂದ ಅವರು ಗ್ರಾಮಾಭಿವೃದ್ದಿ ಯೋಜನೆಯು ರಾಜ್ಯದಾದ್ಯಂತ ₹7ಸಾವಿರ ಕೋಟಿ ವ್ಯವಹಾರ ನಡೆಸಿದ್ದು, ಸಾಲ ವಸೂಲಾತಿಯಲ್ಲೂ ಶೇಕಡ ನೂರನ್ನು ಸಾಧಿಸಿರುವುದು ಶ್ಲಾಘನೀಯ. ಉಡುಪಿ ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದಲೂ ಕಾರ್ಕಳ ಅಗ್ರಸ್ಥಾನದಲ್ಲಿರುವುದನ್ನು ಅವರು ಪ್ರಶಂಸಿಸಿದರು.ಕೃಷಿಯ ಜೊತೆಗೆ ಮಿಶ್ರಬೆಳೆಗಳನ್ನು ಕೂಡಾ ಬೆಳೆದಾಗ ಆದಾಯದ ಹೆಚ್ಚಳ ಸಾಧ್ಯ. ಜೀವನಮಟ್ಟ ಸುಧಾರಿಸಲು ಇದು ಸಹಾಯಕ ಎಂದರು.

ADVERTISEMENT

ಶಾಸಕ ವಿ ಸುನೀಲ್ ಕುಮಾರ್ ಲಾಭಾಂಶ ವಿತರಿಸಿ ಮಾತನಾಡಿ ಗ್ರಾಮೀಣಾಭಿವೃದ್ಧಿ ಚುಟುವಟಿಕೆಗಳಿಗೆ ದೊಡ್ಡ ಮಟ್ಟದ ಬುನಾದಿ ಹಾಕಿದವರು ಡಾ.ಡಿ.ವೀರೇಂದ್ರ ಹೆಗ್ಗಡೆ. ನೆಲದ ಗುಣಗಳಿಗೆ ಗ್ರಾಮೀಣಾಭಿವೃದ್ಧಿ ಯೋಜನೆ ಸ್ಪಂದಿಸಿದೆ. ಸಾವಿರಾರು ಜನರ ಜೀವನ ಮಟ್ಟವನ್ನು ಇದು ಸುಧಾರಿಸಿದೆ. ಗ್ರಾಮಾಭಿವೃದ್ಧಿ ಯೋಜನೆ ಭಾವನಾತ್ಮಕವಾಗಿ ಕೆಲಸ ಮಾಡಿರುದರಿಂದ ಕೇಂದ್ರ ಸಮಿತಿ ಪದಾಧಿಕಾರಿಗಳಿಗೆ ಭಾವನಾತ್ಮಕವಾಗಿ ಜವಾಬ್ದಾರಿ ಹಸ್ತಾಂತರ ಮಾಡಲಾಗಿದೆ ಎಂದರು.

ಮಾಜಿಶಾಸಕ ಗೋಪಾಲ ಭಂಡಾರಿ ಮಲ್ಲಿಗೆ ನಾಟಿ ಅನುದಾನ ವಿತರಿಸಿ ಮಾತನಾಡಿ ಸ್ವಾರ್ಥವಿಲ್ಲದ ಸಮಾಜಸೇವೆಯ ಪರಿಕಲ್ಪನೆ ಇಟ್ಟುಕೊಂಡು ಗ್ರಾಮೀಣಾಭಿವೃದ್ಧಿ ಯೋಜನೆ ಸಮಭಾವ ಸಮಚಿತ್ತದಲ್ಲಿ ಕೆಲಸ ಮಾಡುತ್ತಿದೆ ಎಂದರು.

ಮಾಜಿಅಧ್ಯಕ್ಷ ವಿ.ಪಾಂಡು ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಯೋಜನೆಯ ನೂತನ ಅಧ್ಯಕ್ಷ ಜಯಕುಮಾರ್ ಜೈನ್, ಪುರಸಭೆ ಅಧ್ಯಕ್ಷೆ ಅನಿತಾ ಅಂಚನ್, ವಿಜಯಾ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಸುಧಾಕರ ನಾಯಕ್, ಸಂಪತ್ ಸಾಮ್ರಾಜ್ಯ ಮೊದಲಾದವರು ಉಪಸ್ಥಿತರಿದ್ದರು.
ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ಪುರುಷೋತ್ತಮ್ ಪಿ.ಕೆ ಸ್ವಾಗತಿಸಿದರು. ಯೋಜನಾಧಿಕಾರಿ ಕೃಷ್ಣ ಟಿ. ವರದಿ ಮಂಡಿಸಿದರು. ಪ್ರವೀಣ್ ಮತ್ತು ಗೀತಾ ನಿರೂಪಿಸಿದರು. ಮೇಲ್ವಿಚಾರಕಿ ಮಂಜುಳಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.