ADVERTISEMENT

ಪುಣೆ ಮಡಿಲಿಗೆ ಮಾಹೆ ಸಿಲ್ವರ್ ಕ್ರಿಕೆಟ್ ಪ್ರಶಸ್ತಿ

ವೈದ್ಯರ ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಿ: ಡಾ. ಕುನಾಲ್ ಪಂದ್ಯಶೇಷ್ಠ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 11:36 IST
Last Updated 16 ಏಪ್ರಿಲ್ 2018, 11:36 IST

ಉಡುಪಿ: ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ, ಮಾಹೆ–ಪರಿಗಣಿತ ವಿಶ್ವ ವಿದ್ಯಾಲಯದ ಸಹಯೋಗದಲ್ಲಿ ಆಯೋ ಜಿಸಿದ್ದ ರಾಷ್ಟ್ರಮಟ್ಟದ ವೈದ್ಯರ ಕ್ರಿಕೆಟ್ ಟೂರ್ನಿಯ ಸಿಲ್ವರ್ ಕ್ರಿಕೆಟ್ ಲೀಗ್ 2018 ಪ್ರಶಸ್ತಿಯನ್ನು ಪುಣೆಯ ಪದ್ಮಾಲಯ ಸ್ಟಾರ್ ತಂಡವು ಗೆದ್ದುಕೊಂಡಿತು.

ಭಾನುವಾರ ಮಣಿಪಾಲದ ಎಂಐಟಿ ಕ್ರೀಡಾಂಗಣದಲ್ಲಿ ಜರಗಿದ ಅಂತಿಮ ಟೂರ್ನಮೆಂಟ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಥಾಣೆ ಸುಪರ್ಬ್ಸ್ ತಂಡವು ಕುನಾಲ್ ಶಿಂಧೆ ಅವರ ಮಾರಕ  ಬೌಲಿಂಗ್‌ಗೆ ಮೊದಲ ಮೂರು ವಿಕೆಟ್, ಮೂರು ರನ್ ಪಡೆಯುವಷ್ಟರಲ್ಲೆ ಒಪ್ಪಿಸಿತು. ನಾಲ್ಕನೆ ವಿಕೆಟ್‌ನಲ್ಲಿ ಥಾಣೆ ತಂಡವು ಅಲ್ಪ ಮಟ್ಟಿನ ಚೇತರಿಕೆ ಕಾಣುವಷ್ಟರಲ್ಲಿ ಬೌಲಿಂಗ್‌ಗೆ ಇಳಿದ ದಿನೇಶ್‌ ಅವರು ಉಳಿದ ಮೂರು ವಿಕೆಟ್‌ ಕಬಳಿಸಿ ಮರ್ಮಾಘಾತ ನೀಡಿದರು. ಥಾಣೆ ತಂಡವು 19.5 ಓವರ್‌ನಲ್ಲಿ  82 ರನ್‌ಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಕುನಾಲ್ ಶಿಂಧೆ 10 ಕ್ಕೆ 4, ದಿನೇಶ್ 14ಕ್ಕೆ 3, ಮಹೇಶ್, ತುಶಾರ್ ಮತ್ತು ಸಾಗರ್ ಪಟೇಲ್ ತಲಾ ಒಂದೊಂದು ವಿಕೆಟ್‌ ಪಡೆದರು.

ಸುಲಭ ವಿಜಯದ ಗುರಿಯನ್ನು ಬೆನ್ನತ್ತಿದ ಪದ್ಮಾಲಯ ಸ್ಟಾರ್ ಪುನಾ ತಂಡವು ಹಲವು ಜೀವದಾನಗಳ ಲಾಭವನ್ನು ಪಡೆದು ವಿಜಯದ ಹಾದಿಯಲ್ಲಿ ಮುಂದುವರಿಯಿತು. ಪುಣೆಯ ಮೊದಲ ವಿಕೆಟ್ 27ರಲ್ಲಿ ಪತನ ಹೊಂದಿತು. ಥಾಣೆ ತಂಡವು ಹಲವು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲುವ ಮೂಲಕ ಕೈಯೊಳಗೆ ಬರುತ್ತಿದ್ದ ವಿಜಯದ ಅವಕಾಶವನ್ನು ನೆಲಕಚ್ಚಿಸಿತು. ಪುನಾ ತಂಡದ ಹರೀಷ್ ತ್ರಿವೇದಿಯವರ ಬ್ಯಾಟಿನಿಂದ ಮೂಡಿ ಬಂದ 20 ರನ್‌ಗಳು, ರಾಹುಲ್ ರವರ ಅಜೇಯ 16ರನ್‌ಗಳು ಪುನಾ ತಂಡವು ಮಾಹೆ ಸಿಲ್ವರ್ ಟ್ರೋಫಿಯನ್ನು ಗೆದ್ದು ಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿತು.

ADVERTISEMENT

ಪುನಾ ತಂಡವು 15.5 ಓವರ್‌ ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ ವಿಜಯದ ಮೊತ್ತವನ್ನು ದಾಖಲಿಸುವ ಮೂಲಕ 4 ವಿಕೆಟ್‌ಗಳ ಅಂತರದ ಜಯವನ್ನು ಪಡೆಯಿತು. ಥಾಣೆ ತಂಡದ ಸೋಹನ್ 12 ರನ್ನಿಗೆ 2 ವಿಕೆಟ್‌, ಪವನ್ ಬಡೆ 11ಕ್ಕೆ 1, ಸಚಿನ್ ಪಾಟೀಲ್ 18ಕ್ಕೆ 1 ವಿಕೆಟ್‌ ಪಡೆದರು.

ಉತ್ತಮ ಬೌಲರ್ ಮತ್ತು ಅಂತಿಮ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪುಣೆ ತಂಡದ ಡಾ. ಕುನಾಲ್ ಪಡೆದರು. ಬೆಂಗಳೂರು ತಂಡದ ಡಾ. ಅಜೇಂದ್ರ ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿ ಪಡೆದರು. ಸರಣಿ ಶ್ರೇಷ್ಠ ಗೌರವವು ಥಾಣೆ ತಂಡದ ಸೋಹನ್ ಠಾಕೂರ್ ಪಾಲಿಗೆ ಸೇರಿತು.

ಕೆ.ಪಿ.ಎಲ್ ಆಟಗಾರ ಮತ್ತು ಮಂಗಳೂರು ಪ್ರೀಮಿಯರ್ ಲೀಗ್ ಪಂದ್ಯಕೂಟದ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ನವೀನ್ ಮೂಲ್ಕಿ ವಿತರಿಸಿದರು. ಪಂದ್ಯಾಟದ ಪ್ರಮುಖ ಪ್ರಾಯೋಜಕ ಮೆಡಿಲ್ಯಾಬ್ ಇಂಡಿಯಾ ಕಂಪನಿಯ ಆಡಳಿತ ನಿರ್ದೇಶಕ ಜಯಪ್ರಸಾದ್ ಹೆಗ್ಡೆ, ಡಾ. ಉಪೆಂದ್ರ ನಾಯಕ್, ಶ್ರೀಧರ್ ಉಪಸ್ಥಿತರಿದ್ದರು.

ಡಾ. ನವೀನ್ ಪಾಟೀಲ್ ಸ್ವಾಗತಿಸಿದರು, ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಬಾಲಕೃಷ್ಣ ಪರ್ಕಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.