ADVERTISEMENT

‘ಫಲಾನುಭವಿಗಳಿಗೆ ನಿವೇಶನಕ್ಕೆ ಕ್ರಮ’

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 5:55 IST
Last Updated 14 ಏಪ್ರಿಲ್ 2017, 5:55 IST

ಉಡುಪಿ: ‘ನಿವೇಶನ ರಹಿತ 954 ಮಂದಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮೀನುಗಾರಿಕೆ, ಕ್ರಿಡಾ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ನಿವೇಶನ ಹಂಚಿಕೆ ಕುರಿತು ಉಡುಪಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ‘ಉಡುಪಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ನಿವೇ ಶನ ರಹಿತ ಅರ್ಹ ಫಲಾನುಭವಿಗಳನ್ನು ಈಗಾಗಲೇ ಗುರುತಿಸಲಾಗಿದೆ.

ಅಲ್ಲದೆ, ಇವರಿಗೆ ನಿವೇಶನ ನೀಡಲು ಗ್ರಾಮಾಂತರ ಪ್ರದೇಶದಲ್ಲಿ 50 ಹಾಗೂ ನಗರ ಪ್ರದೇಶದಲ್ಲಿ 14 ಎಕರೆ ಜಮೀನು ಜಮೀನು ಸಹ ಗುರುತಿಸಲಾಗಿದೆ. ಈಗ ನಿವೇಶನ ರಚನೆ ಮಾಡುವ ಕೆಲಸ ನಡೆಯಬೇಕಿದೆ’ ಎಂದರು.

‘ಎಷ್ಟು ಸಂಖ್ಯೆಯ ನಿವೇಶನಗಳು ಲಭ್ಯವಾಗುತ್ತವೆ ಎಂದು ನೋಡಿ ಕೊಂಡು ಅಷ್ಟು ಫಲಾನುಭವಿಗಳನ್ನು ಆಯ್ಕೆ ಮಾಡಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಿಕೊಡಲಾಗುವುದು. ಗ್ರಾಮಾಂತರ ಪ್ರದೇಶದವರಿಗೆ ನಿವೇಶನ ಹಂಚಿಕೆ ಮಾಡಲು ನೋಡಲ್ ಅಧಿ ಕಾರಿಯನ್ನೂ ನೇಮಕ ಮಾಡಲಾಗಿದೆ’ ಎಂದು ಹೇಳಿದರು.

‘ಉಡುಪಿ ನಗರದಲ್ಲಿ ಮೂರು ಮಹಡಿಯ ಅಪಾರ್ಟ್‌ಮೆಂಟ್‌ ನಿರ್ಮಿಸಲು ಕ್ರಮ ಕೈಗೊಳ್ಳಿ. ಈ ಬಗ್ಗೆ ಫಲಾನುಭವಿಗಳ ಸಭೆ ಕರೆದು ಅವರಿಂದ ಅಭಿಪ್ರಾಯ ಸಂಗ್ರಹಿಸಿ’ ಎಂದು ಪೌರಾಯುಕ್ತ ಡಿ. ಮಂಜುನಾಥಯ್ಯ ಅವರಿಗೆ ಸೂಚನೆ ನೀಡಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಜಮೀನು ಲಭ್ಯ ಇರುವ ಬಗ್ಗೆ ಮಾಹಿತಿ ಪಡೆದ ಅವರು, ‘ಕಂದಾಯ ಇಲಾಖೆ ಜಮೀನು ಮಂಜೂರು ಮಾಡಿದ ನಂತರ ಅರಣ್ಯ ಇಲಾಖೆಗೆ ಪತ್ರ ಬರೆದು ಸ್ಪಷ್ಟನೆ ಕೇಳುವುದು ಸರಿಯಲ್ಲ’ ಎಂದರು.

‘ವಿವಿಧ ಯೋಜನೆಗಳಲ್ಲಿ ₹575 ಕೋಟಿ ವೆಚ್ಚದಲ್ಲಿ 4,421 ಕಾಮಗಾರಿ ಗಳನ್ನು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ₹3,839 ಕೋಟಿ ವೆಚ್ಚದ ಒಟ್ಟು 4,421 ಕಾಮಗಾರಿ ಪೂರ್ಣಗೊಂಡಿವೆ. ಉಳಿದವು ಪ್ರಗತಿಯಲ್ಲಿವೆ’ ಎಂದರು. ‘ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ’ ಎಂದು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್‌, ಜಿಲ್ಲಾ ಪಂಚಾಯಿತಿ ಸದಸ್ಯ ಜನಾರ್ದನ ತೋನ್ಸೆ, ಜಿಲ್ಲಾಧಿ ಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್‌,  ತಾಲ್ಲೂಕು ಪಂಚಾಯಿತಿ ಇಒ ಶೇಷಪ್ಪ ಇದ್ದರು.

*
ನಿರ್ದಿಷ್ಟ ಗ್ರಾಮವೊಂದರಲ್ಲಿ ಜಮೀನು ಲಭ್ಯವಿದ್ದರೆ ಅಲ್ಲಿ ರಚನೆ ಮಾಡುವ ನಿವೇಶನಗಳನ್ನು ಹಂಚುವಾಗ ಸ್ಥಳೀಯರಿಗೆ ಆದ್ಯತೆ ನೀಡಿ.
–ಪ್ರಮೋದ್ ಮಧ್ವರಾಜ್, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT