ADVERTISEMENT

ಬೈಂದೂರಿನ ಅಭಿವೃದ್ಧಿಗೆ ಯೋಜನಾಬದ್ಧ ನಡೆ, ಪ್ರಯತ್ನಕ್ಕೆ ಇರದು ನಿಲುಗಡೆ

ಕ್ಷೇತ್ರದ ಅಭಿವೃದ್ಧಿ ಹೊಸ ಆಲೋಚನೆ, ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆಗೆ ಒತ್ತು, ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ರಾಜಿ ಇಲ್ಲ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 6:36 IST
Last Updated 18 ಜೂನ್ 2018, 6:36 IST
ಬಿ.ಎಂ.ಸುಕುಮಾರ ಶೆಟ್ಟಿ
ಬಿ.ಎಂ.ಸುಕುಮಾರ ಶೆಟ್ಟಿ   

ಬೈಂದೂರು: ಉತ್ತರ ಕನ್ನಡ ಹಾಗೂ ಉಡುಪಿ ಗಡಿ ತಾಲ್ಲೂಕು ಬೈಂದೂರು. ವಾರಾಹಿ ನದಿ ತನಕ ಹರಡಿಕೊಂಡಿದ್ದು ಅತ್ಯಂತ ಅಧಿಕ ಭೂ ವಿಸ್ತಾರ ಹೊಂದಿರುವ ವಿಧಾನಸಭಾ ಕ್ಷೇತ್ರ. ತಿಂಗಳುಗಳ ಹಿಂದಷ್ಟೆ ತಾಲ್ಲೂಕು ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ. 26 ಗ್ರಾಮಗಳು ಮತ್ತು ಕುಂದಾಪುರ ತಾಲ್ಲೂಕಿಗೆ ಸೇರಿದ 39 ಗ್ರಾಮಗಳು ಸೇರಿ 65 ಗ್ರಾಮ ಹೊಸ ತಾಲ್ಲೂಕಿನ ವ್ಯಾಪ್ತಿಗೆ ಬರುತ್ತವೆ. 43 ಗ್ರಾಮ ಪಂಚಾಯಿತಿ ಸೇರಿವೆ.

ಪುರಸಭೆಯ ಅರ್ಹತೆ ಇರುವ ಯಡ್ತರೆ-ಬೈಂದೂರು, ಪಟ್ಟಣ ಪಂಚಾಯಿತಿ ಅರ್ಹತೆ ಇರುವ ಶಿರೂರು, ಉಪ್ಪುಂದ. ನಾಡ, ಗಂಗೊಳ್ಳಿ ಬಿಟ್ಟರೆ ಉಳಿದವು ಗ್ರಾಮೀಣ ಪ್ರದೇಶಗಳು. ಕೊಲ್ಲೂರು, ಕಮಲಶಿಲೆ, ಹಟ್ಟಿಯಂಗಡಿ ದೇವಾಲಯಗಳು, ಸೋಮೇಶ್ವರ, ಮರವಂತೆ-ತ್ರಾಸಿ ಕಡಲ ತೀರಗಳು, ಕೋಸಳ್ಳಿ, ಬೆಳ್ಗಲ್ ತೀರ್ಥ, ಕುಟಚಾದ್ರಿ ಚಾರಣ ತಾಣಗಳು ಇಲ್ಲಿನ ಪ್ರಮುಖ ಜನಾಕರ್ಷಣೆ ಕೇಂದ್ರಗಳು. ಗಂಗೊಳ್ಳಿ, ಮರವಂತೆ, ಕೊಡೇರಿ, ಉಪ್ಪುಂದ, ಶಿರೂರು ಇಲ್ಲಿನ ಮೀನುಗಾರಿಕಾ ಕೇಂದ್ರಗಳು. ಈ ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಬಿ.ಎಂ.ಸುಕುಮಾರ ಶೆಟ್ಟಿ ಅವರು ‘ಪ್ರಜಾವಾಣಿ’ ಹಲವು ಪ್ರಶ್ನೆಗಳಿಗೆ ಮುಕ್ತವಾದ ಉತ್ತರ ನೀಡಿದ್ದಾರೆ.

ಕ್ಷೇತ್ರದ ಅಭಿವೃದ್ಧಿಯ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಆತ್ಮವಿಶ್ವಾಸದ ಹಿಂದಿರುವ ಶಕ್ತಿ ಯಾವುದು?

ADVERTISEMENT

ಶಿಕ್ಷಣ, ಧಾರ್ಮಿಕ, ಉದ್ಯಮ ಸಂಸ್ಥೆಗಳನ್ನು ಮಾದರಿಯಾಗಿ ರೂಪಿಸಿರುವ ಹಿನ್ನೆಲೆ ಅನುಭವ ನನಗಿದೆ. ಕ್ಷೇತ್ರವನ್ನು ರಾಜ್ಯ ಸರ್ಕಾರದ ಮಟ್ಟದಲ್ಲಿ ಪ್ರಬಲವಾಗಿ ಪ್ರತಿನಿಧಿಸುವ ಸಾಮರ್ಥ್ಯವಿದೆ. ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲ ಸಿಗಲಿದೆ.

ಕ್ಷೇತ್ರದ ಕರಾವಳಿ, ಮಲೆನಾಡು ಎರಡೂ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಹೇಗೆ?

ಬೈಂದೂರು ಪಂಚನದಿ ಹರಿಯುವ ಕ್ಷೇತ್ರ. ವಾರಾಹಿ ನದಿ ಎಡದಂಡೆ ಕಾಲುವೆಯಿಂದ ಆ ಭಾಗದ ಕೃಷಿಗೆ ನೀರು ಸಿಗುತ್ತಿದೆ. ಉಡುಪಿಗೆ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳ್ಳಲಿದೆ. ಬಲದಂಡೆ ಕಾಲುವೆ ನಿರ್ಮಾಣ ಮಾಡಿ ಬೈಂದೂರು ಕ್ಷೇತ್ರಕ್ಕೂ ನೀರು ಹರಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಾನು ಪ್ರಯತ್ನ ನಡೆಸುವೆ.

ಕ್ಷೇತ್ರದ ಸರಿಸುಮಾರು ಅರ್ಧಭಾಗ ಪಶ್ಚಿಮ ಘಟ್ಟದ ತಪ್ಪಲಿನ ವ್ಯಾಪ್ತಿಗೆ ಬರುವುದರಿಂದ ಅಲ್ಲಿನ ಸೌಲಭ್ಯ ವೃದ್ಧಿಗೆ ತಡೆಯಾಗಿರುವ ರಕ್ಷಿತಾರಣ್ಯ, ಕಸ್ತೂರಿ ರಂಗನ್ ವರದಿ, ಡೀಮ್ಡ್ ಫಾರೆಸ್ಟ್ ಅಂಶ ಹೇಗೆ ನಿಭಾಯಿಸುತ್ತೀರಿ?

ಇದು ಬೈಂದೂರು ಕ್ಷೇತ್ರಕ್ಕೆ ಮಾತ್ರ ಸೀಮಿತ ಸಮಸ್ಯೆಯಲ್ಲ. ಇವುಗಳ ಪರಿಹಾರ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಟ್ಟದಲ್ಲಿ ಆಗಬೇಕು. ಜಿಲ್ಲೆಯ ಎಲ್ಲ ಶಾಸಕರು ಈ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ನಡೆಸುವರು.

ಮೀನುಗಾರರ ದೃಷ್ಟಿಯಲ್ಲಿ ಪ್ರಮುಖ ಸಮಸ್ಯೆ ಎನಿಸಿರುವ ಸಿಆರ್‌ಜೆಡ್ ನಿರ್ಬಂಧಗಳಿಗೆ ಪರಿಹಾರ ಸಾಧ್ಯವೆ?

ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆ ಈಚೆಗೆ ಹೊರಡಿಸಿರುವ ಕರಡು ಅಧಿಸೂಚನೆಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿನ ಅಭಿವೃದ್ಧಿ ನಿಷೇಧಿತ ವಲಯವನ್ನು 50 ಮೀಟರಿಗೆ ಇಳಿಸಲಾಗಿದೆ. ಆದರೆ, ಅದಕ್ಕೆ ಜನದಟ್ಟಣೆಯ ಷರತ್ತು ವಿಧಿಸಿರುವುದು ಸರಿಯಲ್ಲ. ಇದನ್ನು ಸಂಸತ್‌ ಸದಸ್ಯರ ಗಮನಕ್ಕೆ ತಂದು ಈ ಷರತ್ತನ್ನು ತೆಗೆದು ಹಾಕುವಂತೆ ಒತ್ತಡ ತರುತ್ತೇನೆ.

ಇಲ್ಲಿನ ಕುಗ್ರಾಮಗಳಿಗೆ ಸೂಕ್ತ ಸಾರಿಗೆ ಸೌಲಭ್ಯ ಇಲ್ಲವೆಂಬ ಕೂಗು ಕೇಳಿಬರುತ್ತಲೇ ಇರುತ್ತದೆ. ಅದಕ್ಕೆ ಯಾವ ಕ್ರಮ ಕೈಗೊಳ್ಳುತ್ತೀರಿ?

ಇದರ ಕುರಿತು ಇಷ್ಟರಲ್ಲೇ ಜಿಲ್ಲಾಧಿಕಾರಿಗಳ ಮತ್ತು ಸಾರಿಗೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಅಂತಹ ಕುಗ್ರಾಮಗಳನ್ನು ಗುರುತಿಸಿ ಅಲ್ಲಿಗೆ ಶೀಘ್ರವೇ ಸರ್ಕಾರಿ ಅಥವಾ ಖಾಸಗಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು.

ಕ್ಷೇತ್ರದ ಎಲ್ಲೆಡೆಗೆ ವಿದ್ಯುತ್ ಸೌಲಭ್ಯ ತಲಪಿದೆಯಾದರೂ ಪೂರೈಕೆಯಲ್ಲಿ ಸದಾ ವ್ಯತ್ಯಯ ಆಗುತ್ತಿದೆಯಲ್ಲ?

ಇದು ನನ್ನ ಗಮನದಲ್ಲಿದೆ. ಮೆಸ್ಕಾಂ ಅಧಿಕಾರಿಗಳು ಮಳೆಗಾಲದ ಅಡಚಣೆ ಮುಂದಿಟ್ಟಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು ಎಂಬ ಎಚ್ಚರಿಕೆ ನೀಡಿದ್ದೇನೆ. ಆ ಬಗ್ಗೆ ಸದಾ ನಿಗಾ ವಹಿಸುವೆ.

ಬೈಂದೂರು ತಾಲ್ಲೂಕನ್ನು ಸುಸಜ್ಜಿತಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಏನು ಮಾಡುವಿರಿ?

ಈ ವಿಚಾರದಲ್ಲಿ ನನ್ನದೇ ಆದ ಕನಸುಗಳಿವೆ. ಬೈಂದೂರು ತಾಲ್ಲೂಕು ತೀರಾ ಚಿಕ್ಕದಾಯಿತು ಎಂಬ ಬೇಸರದ ನಡುವೆಯೇ ಬೈಂದೂರನ್ನು ಒಂದು ಮಾದರಿ ಕೇಂದ್ರ ರೂಪಿಸಲು ಯೋಜನಾಬದ್ಧವಾಗಿ ಮುಂದುವರಿಯುವ ಚಿಂತನೆ ನಡೆಸಿದ್ದೇನೆ. ಅದು ಕೆಲಕಾಲ ತೆಗೆದುಕೊಳ್ಳಲಿದೆ.

ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಕೇಂದ್ರಗಳಲ್ಲಿ ವೈದ್ಯರ ಆರೋಗ್ಯ ಸಿಬ್ಬಂದಿ, ಲಿಪಿಕ ನೌಕರರ ಕೊರೆತೆ ಇದೆಯಲ್ಲ?

ನಿಜ. ಈ ವಿಚಾರದಲ್ಲಿ ಸರ್ಕಾರದ ಧೋರಣೆ ಬದಲಾಗಬೇಕಿದೆ. ತೀರಾ ಗ್ರಾಮಾಂತರ ಪ್ರದೇಶಗಳಿಂದ ಕೂಡಿದ ಬೈಂದೂರು ಕ್ಷೇತ್ರದಲ್ಲಿ ಒಂದೇ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲ. ಹೆಚ್ಚಿನ ಚಿಕಿತ್ಸೆಗೆ ಜನರು ಕುಂದಾಪುರ, ಉಡುಪಿ, ಮಣಿಪಾಲ ಅವಲಂಬಿಸಬೇಕು. ಇರುವ ಆರೋಗ್ಯ ಕೇಂದ್ರಗಳಿಗೆ ಸಿಬ್ಬಂದಿ ಒದಗಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವುದರ ಜತೆಗೆ ಬೈಂದೂರಿನಲ್ಲಿ ಸುಸಜ್ಜಿತ ತಾಲ್ಲೂಕು ಆಸ್ಪತ್ರೆ ಆರಂಭಿಸುವುದಕ್ಕೆ ಆದ್ಯತೆ ನೀಡಿ ಕೆಲಸ ಮಾಡಲಿದ್ದೇನೆ.

ಕ್ಷೇತ್ರವನ್ನು ’ಸ್ಮಾರ್ಟ್’ ಆಗಿ ಬದಲಿಸುವ ಕುರಿತು ನಿಮ್ಮ ಕನಸುಗಳೇನು ಮತ್ತು ಯಾವುದಾದರೂ ಮಹತ್ವಾಕಾಂಕ್ಷೆ ಹೊಂದಿರುವಿರಾ?

ಕ್ಷೇತ್ರದ ಅಭಿವೃದ್ಧಿಯ ಮುನ್ನೋಟದ ಯೋಜನೆ ರೂಪಿಸಿ, ಅದನ್ನು ಹಂತಹಂತವಾಗಿ ಅನುಷ್ಠಾನಿಸುವ ಕನಸು ಇದೆ. ಎಂಜಿನಿಯರಿಂಗ್, ಮೆಡಿಕಲ್ ಕಾಲೇಜು, ಒತ್ತಿನೆಣೆಯಲ್ಲಿ ವಿಮಾನ ನಿಲ್ದಾಣದ ಜತೆಗೆ ಸಮಗ್ರ ಅಭಿವೃದ್ಧಿಯ ಯೋಜನೆ ಇದಾಗಬೇಕು ಎಂಬ ಹಂಬಲ ಇದೆ.

ಮೂಲಸೌಲಭ್ಯ ವೃದ್ಧಿಯೇ ನೈಜ ಅಭಿವೃದ್ಧಿಯಲ್ಲ; ಕ್ಷೇತ್ರದ ಮಾನವ ಅಭಿವೃದ್ಧಿಯನ್ನು ಹೇಗೆ ಸಾಧಿಸುವಿರಿ?

ಶಿಕ್ಷಣ, ಆರೋಗ್ಯ ಸೇವೆ ಉತ್ತಮಪಡಿಸುವ, ಜನರ ಆದಾಯ ಹೆಚ್ಚಳಕ್ಕೆ ಅಗತ್ಯ ಅವಕಾಶ ಸೃಷ್ಟಿಸುವ, ಸಾಮಾಜಿಕ ನ್ಯಾಯ ಪಾಲನೆಗೆ ಆದ್ಯತೆ ನೀಡುವ, ಜನರ ಆರ್ಥಿಕ ಮತ್ತು ನೈತಿಕ ಪತನಕ್ಕೆ ಕಾರಣವಾಗುವ ಮಟ್ಕಾ, ಜೂಜು, ಅಮಲು ಸೇವನೆಗೆ ಕಡಿವಾಣ ಹಾಕುವ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ನಿರ್ಧಾರ ಮಾಡಿದ್ದೇನೆ.

ಎಸ್.ಜನಾರ್ದನ ಮರವಂತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.