ADVERTISEMENT

ಭಾಷಾ ಬೋಧನೆ ಪರಿಣಾಮಕಾರಿ ಆಗಲಿ: ಮಹಾಬಲೇಶ್ವರ ರಾವ್‌

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 6:12 IST
Last Updated 22 ಏಪ್ರಿಲ್ 2017, 6:12 IST
ಉಡುಪಿ: ‘ಭಾಷಾ ಬೋಧನೆಯನ್ನು ಮಕ್ಕಳ ಸಮೀಪಕ್ಕೆ ಕೊಂಡೊಯ್ದಾಗ ಮಕ್ಕಳು ಓದುವಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾರೆ. ಆ ಮೂಲಕ ಸಂಸ್ಕೃತಿಯ ಆಚಾರ ವಿಚಾರಗಳ, ರೀತಿ ನೀತಿಗಳ ಆಳ, ಸೂಕ್ಷ್ಮತೆಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಉಡುಪಿ ಡಾ. ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಹಾಬಲೇಶ್ವರ ರಾವ್‌ ಹೇಳಿದರು. 
 
ಉಡುಪಿ ಡಾ. ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಕನ್ನಡ ಬೋಧನಾ ವಿದ್ಯಾರ್ಥಿ ಶಿಕ್ಷಕರಿಗಾಗಿ ಇತ್ತೀಚೆಗೆ ಕಾಲೇಜಿನಲ್ಲಿ ಏರ್ಪಡಿಸಿದ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
 
‘ಭಾಷೆ ಹಾಗೂ ಆಲೋಚನೆ ನಡುವೆ ಅಂತರ ಸಂಬಂಧವಿದೆ. ಭಾಷಾ ಕಲಿಕೆ ಪರಿಣಾಮಕಾರಿಯಾದಾಗ ಸಾಹಿತ್ಯಾಭಿರುಚಿ ಉಂಟಾಗಿ ಆ ಮೂಲಕ ಜ್ಞಾನದ ವಿಸ್ತಾರವಾಗುತ್ತದೆ. ಆ ನಿಟ್ಟಿನಲ್ಲಿ ಭಾಷಾ ಬೋಧಕರು ಯೋಚಿಸಬೇಕು’ ಎಂದು ಅವರು ಹೇಳಿದರು. 
 
ಪರ್ಕಳ ಪ್ರೌಢಶಾಲೆ ಶಿಕ್ಷಕ ಗ್ರಹಪತಿ ಶಾಸ್ತ್ರಿ ಅವರು ಮಾತನಾಡಿ, ‘ಅಂತರಾಳದಲ್ಲಿ ಭಾಷೆಯ ಬಗೆಗೆ ಅಭಿಮಾನ ಹೊಂದಿ ಬೋಧನೆಯನ್ನು ಆಸಕ್ತಿದಾಯಕವಾಗಿ ಕುತೂಹಲಭರಿತವಾಗಿ ಮಾಡಿದಾಗ ಮಾತ್ರ ಕಲಿಕೆ ಪರಿಣಾಮಕಾರಿಯಾಗುತ್ತದೆ. ವಿದ್ಯಾರ್ಥಿ ಶಿಕ್ಷಕರು ಆ ನಿಟ್ಟಿನಲ್ಲಿ ಚಿಂತಿಸಬೇಕು.  ವಿದ್ಯಾರ್ಥಿಗಳ ಸೂಕ್ಷ್ಮತೆ ಅರಿತು ಬೋಧನೆ ಮಾಡಬೇಕು  ಕರೆ ನೀಡಿದರು. 
 
ವಿದ್ಯಾರ್ಥಿ ಶಿಕ್ಷಕರಾದ ರಾಜಶ್ರೀ ಸ್ವಾಗತಿಸಿದರು. ಪೃಥ್ವಿರಾಜ್‌ ನಿರೂಪಿ ಸಿದರು, ಗೀತಾ ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.