ADVERTISEMENT

ಮಣಿಪಾಲ ವಿ.ವಿ. ನೂತನ ಕುಲಪತಿ ಡಾ.ವಿನೋದ್‌ ಭಟ್‌

​ಪ್ರಜಾವಾಣಿ ವಾರ್ತೆ
Published 28 ಮೇ 2015, 5:27 IST
Last Updated 28 ಮೇ 2015, 5:27 IST

ಹಿರಿಯಡಕ: ಮಣಿಪಾಲ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಡಾ.ಎಚ್.ವಿನೋದ್ ಭಟ್ ನೇಮಕಗೊಂಡಿದ್ದಾರೆ. ಪ್ರಸ್ತುತ ವಿ.ವಿ.ಯ ಸಹಕುಲಪತಿಯಾಗಿರುವ ಇವರು ಜೂನ್ 1ರಿಂದ ಅನ್ವಯವಾಗುವಂತೆ 5 ವರ್ಷಗಳ ಕಾಲ ವಿವಿಯ ಕುಲಪತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಡಾ.ಎಚ್.ವಿನೋದ್ ಭಟ್‌ರವರು ಕಾರ್ಕಳದ ಡಾ.ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಯಲ್ಲಿ 15 ವರ್ಷಗಳ ಕಾಲ ಮುಖ್ಯ ವೈದ್ಯಾಧಿಕಾರಿಯಾಗಿ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಾಹಕ ಅಧಿಕಾರಿಯಾಗಿ ಹಾಗು ಮಣಿಪಾಲ ವಿವಿಯ ಸಹಕುಲಪತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸಮುದಾಯ ಔಷಧಿ ವಿಭಾಗದಲ್ಲಿ ಎಂ.ಡಿ. ಯಾಗಿರುವ ಡಾ.ಭಟ್‌ರವರು ಗ್ಯಾಸ್ಗೋದ ರಾಯಲ್ ಕಾಲೇಜ್ ಆಫ್ ಫಿಜೀಶಿಯನ್ಸ್ ಆ್ಯಂಡ್ಸರ್ಜನ್‌ನ ಗೌರವ ಫೆಲೋ ಆಗಿದ್ದಾರೆ. ಡಾ.ವಿನೋದ್ ಭಟ್‌ರವರು ಪ್ರಾಧ್ಯಾಪಕರಾಗಿಯೂ ಆಡಳಿಗಾರರಾಗಿಯೂ ಸುದೀರ್ಘ ಅನುಭವವನ್ನು ಹೊಂದಿದ್ದು, ಅವರ ಹಲವಾರು ವೈಜ್ಞಾನಿಕ ಪ್ರಕಟಣೆಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ.


ಸಂಶೋಧನೆಯಲ್ಲಿ ಅಪಾರ ಅನುಭವ ಹೊಂದಿರುವ ಇವರು ಮಣಿಪಾಲ ವಿವಿಗೆ ಬಾಹ್ಯ ಸಂಶೋಧನಾ ನಿಧಿ ಹರಿದುಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು ಸ್ಥಾಪಿಸಿದ ಸಂಶೋಧನಾ ನಿರ್ದೇಶನಾಲಯ ವಿ.ವಿ.ಯ ಎಲ್ಲಾ ವಿಷಯಗಳಲ್ಲಿ ಸಂಶೋಧನ ಗುರಿ ತಲುಪುವಲ್ಲಿ ಹಾಗೂ ಕ್ಷೇತ್ರ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ ಇವರು ಸ್ಥಾಪಿಸಿದ ಮಣಿಪಾಲ ವಿ.ವಿ. ಪ್ರೆಸ್‌ನ ಮೂಲಕ ಇವರ ಮಾರ್ಗದರ್ಶನದಲ್ಲಿ ಕಳೆದ 3 ವರ್ಷಗಳಲ್ಲಿ ಅನೇಕ ಪ್ರಕಟಣೆಗಳು ಹೊರಬಂದಿದೆ.

ಅಂತರರಾಷ್ಟ್ರೀಯ ಕಾರ್ಯಕ್ರಮಗಳ ಕಚೇರಿಯನ್ನು ತೆರೆದು ವಿದೇಶದ ಅನೇಕ ವಿಶ್ವವಿದ್ಯಾಲಯದೊಂದಿಗೆ ಶೈಕ್ಷಣಿಕ ಸಂಪರ್ಕವನ್ನು ಸಾಧಿಸಿದ್ದಾರೆ. ಶ್ರೀಲಂಕಾ, ದುಬೈ, ದಕ್ಷಿಣ ಆಫ್ರೀಕಾದಲ್ಲಿ ಮಣಿಪಾಲದ ಹೊಸ ಯೋಜನೆಗಳ ಪ್ರವೇಶವಾಗುವಲ್ಲಿ ಡಾ.ಭಟ್‌ರವರ ಪಾತ್ರ ಮಹತ್ವವಾದುದು ಇವರ ಪತ್ನಿ ಡಾ.ಪಾರ್ವತಿ ಭಟ್‌ರವರು ಉಡುಪಿಯ ಡಾ.ಟಿ.ಎಂ.ಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT