ADVERTISEMENT

ಮಹಿಳೆಯರಿಗೆ ಪೊಲೀಸರ ಅಭಯ

ಜಾಗೃತಿ ಮೂಡಿಸಲು ಠಾಣೆಯಲ್ಲಿ ಪ್ರಥಮ ಮಹಿಳಾ ಸಭೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2014, 11:03 IST
Last Updated 22 ಜುಲೈ 2014, 11:03 IST

ಬೈಂದೂರು: ‘ನಮ್ಮ ಠಾಣೆಯ ವ್ಯಾಪ್ತಿಯ ಎಲ್ಲರಿಗೆ ರಕ್ಷಣೆ ನೀಡುವ ಹೊಣೆ ನಮಗಿದೆ. ಮಹಿಳೆಯರು ನಮ್ಮನ್ನು ನಿಮ್ಮ ಬಂಧುಗಳೆಂದು ಪರಿಗಣಿಸಿ. ನಿಮಗೆ ಆಗುವ  ಕಿರುಕುಳ, ದೌರ್ಜನ್ಯ, ಹಿಂಸೆಯ ಸಂದರ್ಭದಲ್ಲಿ ಹಿಂಜರಿಕೆ, ಅಂಜಿಕೆ ಇಲ್ಲದೆ ಠಾಣೆಗೆ ಬನ್ನಿ ಅಥವಾ ದೂರವಾಣಿಯ ಮೂಲಕ ಸಂಪರ್ಕಿಸಿ, ನಿಮಗೆ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ’ ಎಂದು ವೃತ್ತ ನಿರೀಕ್ಷಕ ಎಂ. ಸುದರ್ಶನ ಭರವಸೆ ನೀಡಿದರು.

ಮಹಿಳೆಯರ ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡ ಮೊದಲ ಕಾರ್ಯಕ್ರಮವಾಗಿ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಸೋಮವಾರ ನಡೆದ ಮಹಿಳೆಯರ ಸಭೆಯಲ್ಲಿ ಅವರು ಮಾತನಾಡಿದರು.

‘ಮಹಿಳಾ ಪೊಲೀಸ್‌ ಸಿಬ್ಬಂದಿ ರಮ್ಯಾ, ನಾಗಶ್ರೀ, ಪುಷ್ಪಾ, ಕವಿತಾ, ಜಯಶೀಲಾ ಸೇವೆಯಲ್ಲಿದ್ದಾರೆ. ಮಹಿಳೆಯರ ಸಮಸ್ಯೆಗೆ ಅವರು ಸದಾ ಸ್ಪಂದಿ ಸುವರು. ತಮ್ಮ ಅನ್ಯ ಕರ್ತವ್ಯದ ಜತೆಗೆ ವಸತಿ ಪ್ರದೇಶಗಳಿಗೆ ತೆರಳಿ ಮಹಿಳೆಯರನ್ನು ಭೇಟಿ ಮಾಡುವರು. ಅಲ್ಲಿ ನಡೆ ಯುವ ಮಹಿಳಾ ಸಂಘಗಳ ಸಭೆ, ಗ್ರಾಮಸಭೆಗಳಲ್ಲಿ ಭಾಗವಹಿಸಿ ಮಹಿಳೆಯರ ಸಂಕಷ್ಟಗಳಿಗೆ ಪರಿಹಾರ ಒದಗಿಸುವರು’ ಎಂದು ಹೇಳಿದರು.

‘ಮಹಿಳೆಯರಲ್ಲಿ ಪೊಲೀಸರ ಬಗೆಗಿರುವ ಭಯವನ್ನು ದೂರ ಮಾಡುವ ಉದ್ದೇಶದಿಂದ ಮೊದಲ ಸಭೆಯನ್ನು ಠಾಣೆಯಲ್ಲೇ ಕರೆಯಲಾಗಿದೆ. ಜಿಲ್ಲಾ ಅಧೀಕ್ಷಕರ ಮಾರ್ಗದರ್ಶನ, ಪ್ರೋತ್ಸಾಹ, ಸ್ಥಳೀಯ ಎಸ್‌ಐ ಮತ್ತು ಸಿಬ್ಬಂದಿಯ ಸಹಕಾರ ಈ ಅಭಿಯಾನಕ್ಕೆ ದೊರಕಿದೆ. ನವೋದಯ ಸ್ವಸಹಾಯ ಸಂಘಗಳು, ಯುವ ಸಂಘಟನೆಗಳು ಕೈಜೋಡಿಸಿವೆ’ ಎಂದು ಹೇಳಿದರು.

ಕಾರ್ಯಕ್ರಮದ ನಂತರ ಶಿರೂರಿನ ಆಲಂದೂರು ಶಾಲೆ, ಕಾಲ್ತೋಡು ಗ್ರಾಮ ಪಂಚಾಯಿತಿ ಮತ್ತು ಬೈಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಭೆಗಳು ನಡೆದವು. ಎಸ್‌ಐ ಸಂತೋಷ ಕಾಯ್ಕಿಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.