ADVERTISEMENT

ಯಾವ ಅಲೆಯೂ ಇಲ್ಲ: ಗುರುದೇವ್‌

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2014, 9:47 IST
Last Updated 15 ಏಪ್ರಿಲ್ 2014, 9:47 IST

ಉಡುಪಿ: ‘ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಭ್ರಷ್ಟಾಚಾರದಲ್ಲಿ ತೊಡಗಿವೆ. ಬ್ರಿಟಿಷರು 300 ವರ್ಷದಲ್ಲಿ ಕೊಳ್ಳೆಹೊಡೆದ ಸಂಪತ್ತನ್ನು ಯುಪಿಎ ಸರ್ಕಾರ ಹತ್ತು ವರ್ಷದ ಆಡಳಿತ ಅವಧಿಯಲ್ಲಿ ದೋಚಿದೆ’ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಎಸ್‌.ಎಚ್‌. ಗುರುದೇವ್‌ ಹೇಳಿದರು.

ನಗರದ ಜೋಡುಗಟ್ಟೆಯಲ್ಲಿ ಏರ್ಪಡಿಸಿದ್ದ ರೋಡ್‌ ಶೋ ಉದ್ಘಾಟನೆಯ ನಂತರ ಮಾತನಾಡಿದ ಅವರು, ಗುಜರಾತ್‌ ರಾಜ್ಯ ಅಭಿವೃದ್ಧಿ ಆಗಿದೆ ಎಂಬುದು ಸುಳ್ಳು. ಆ ರಾಜ್ಯದ ಕಛ್‌ ಮತ್ತು ಸೌರಾಷ್ಟ್ರ ಭಾಗದಲ್ಲಿ ಜನರಿಗೆ ಕುಡಿಯುವ ನೀರಿನ ಪೂರೈಕೆಯಾಗುತ್ತಿಲ್ಲ. ದಿನದ 24 ಗಂಟೆಯೂ ವಿದ್ಯುತ್‌ ಪೂರೈಕೆ ಎಂಬ ಘೋಷಣೆಯೂ ಸುಳ್ಳು. ಕೆಲವು ನಗರಗಳಲ್ಲಿ ಮಾತ್ರ 24 ಗಂಟೆ ವಿದ್ಯುತ್‌ ಪೂರೈಕೆ ಇದೆಯೇ ಹೊರತು ಎಲ್ಲೆಡೆ ಇಲ್ಲ, ಕೂಲಿ ಕಾರ್ಮಿಕರು, ರೈತರು ಮತ್ತು ಮೀನುಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.

ಬಡ ರೈತರ ಜಮೀನನ್ನು ಕಿತ್ತುಕೊಳ್ಳುತ್ತಿರುವ ಸರ್ಕಾರ ಅದನ್ನು ಬಂಡವಾಳ ಶಾಹಿಗಳಿಗೆ ನೀಡುತ್ತಿದೆ. ಪ್ರಚಾರದ ಸಮಯದಲ್ಲಿ ಸುಮಾರು 50 ಸಾವಿರ ಜನರನ್ನು ಭೇಟಿ ಮಾಡಿದ್ದೇನೆ. ಎಲ್ಲಿಯೂ ಯಾವ ಅಲೆಯೂ ಇಲ್ಲ. ಯುವಕರು, ಮಹಿಳೆಯರು, ಆಮ್‌ ಆದ್ಮಿ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ. ಸುಮಾರು ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೋಡುಗಟ್ಟೆಯಿಂದ ಆರಂಭವಾದ ರೋಡ್‌ ಶೋ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಪಕ್ಷದ ಪರ ಘೋಷಣೆ ಕೂಗಿದ ಕಾರ್ಯಕರ್ತರು ಮತ ಯಾಚನೆ ಮಾಡಿದರು. ವಿಜಯ್‌ ಕುಮಾರ್‌ ಕಟಪಾಡಿ, ಮಹಮ್ಮದ್‌ ಸಿರಾಜ್‌, ಕಾರ್ತಿಕ್‌, ಸಹದೇವ್‌, ಅನೂಪ್‌, ಪ್ರಜ್ವಲ್‌, ಹರ್ಷ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.