ADVERTISEMENT

ರಕ್ತದಾನ ದಾನಗಳಲ್ಲೇ ಶ್ರೇಷ್ಠ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 8:41 IST
Last Updated 17 ಏಪ್ರಿಲ್ 2017, 8:41 IST

ಉಡುಪಿ: ‘ರಕ್ತ ಅತ್ಯಂತ ಅಮೂಲ್ಯ ವಾದ ವಸ್ತು. ಇದಕ್ಕೆ ಪರ್ಯಾಯವಾದ ವಸ್ತು ಇನ್ನೊಂದಿಲ್ಲ’ ಎಂದು ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಹೇಳಿದರು.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಗ್ಯಾರೇಜು ಮಾಲೀಕರ ಸಂಘ, ಬನ್ನಂಜೆ ಬಿಲ್ಲವರ ಸೇವಾ ಸಂಘ, ಅಭಿವೃದ್ಧಿ ನವೋದಯ ಸ್ವಸಹಾಯ ಸಂಘಗಳ ಒಕ್ಕೂಟ, ಉಡುಪಿ ಜಿಲ್ಲಾ ಆಟೊ ಚಾಲಕ ಮಾಲೀಕರ ಸಂಘಗಳ ಒಕ್ಕೂಟ ಹಾಗೂ ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹ ಯೋಗದಲ್ಲಿ ಬನ್ನಂಜೆ ನಾರಾಯಣಗುರು ಮಂದಿರದ ಸಭಾಂಗಣದಲ್ಲಿ ಭಾನು ವಾರ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

‘ತುರ್ತು ಸಂದರ್ಭಗಳಲ್ಲಿ ರೋಗಿ ಗಳಿಗೆ ರಕ್ತವೇ ಮುಖ್ಯವಾಗುತ್ತದೆಯೇ ಹೊರತು, ರಕ್ತ ನೀಡುವ ವ್ಯಕ್ತಿಯ ಜಾತಿ ಮುಖ್ಯವಲ್ಲ. ರಕ್ತ ಜಾತಿ, ಧರ್ಮಗಳಿಂದ ಹೊರತಾದದ್ದು’ ಎಂದು ಅಭಿಪ್ರಾಯ ಪಟ್ಟರು.‘ರಕ್ತದಾನ ಮಾಡುವುದರಿಂದ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಸಾಧ್ಯ. ಇಂದಿನ ದಿನಗಳಲ್ಲಿ ಮಹಿಳೆ ಯರು ಹೆಚ್ಚು ಒತ್ತಡದಲ್ಲಿ ಕೆಲಸ ಮಾಡು ವುದರಿಂದ ಆಗಾಗ್ಗೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಹಾಗಾಗಿ ಅವರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಅಗತ್ಯ’ ಎಂದರು.

ನಗರಸಭಾ ಸದಸ್ಯ ಹರೀಶ್‌ರಾಮ್‌ ಬನ್ನಂಜೆ ಮಾತನಾಡಿ, ‘ಒಂದು ಯೂನಿಟ್‌ ರಕ್ತದಿಂದ ಮೂರರಿಂದ ನಾಲ್ಕು ಜೀವಗಳನ್ನು ಉಳಿಸಲು ಸಾಧ್ಯವಿದೆ. ರಕ್ತಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದು ಅಮೂಲ್ಯವಾದುದು. ಹಾಗಾಗಿ ಹೆಚ್ಚು ಹೆಚ್ಚು ಶಿಬಿರಗಳನ್ನು ಆಯೋಜಿಸುವ ಮೂಲಕ ರಕ್ತದಾನದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು’ ಎಂದರು.

ADVERTISEMENT

ಬನ್ನಂಜೆ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಬಿ.ಬಿ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯ ಮಹೇಶ್‌ ಠಾಕೂರ್‌, ಸಮಾಜ ಸೇವಕ ವಿಶುಕುಮಾರ್‌ ಶೆಟ್ಟಿ, ಅಭಿವೃದ್ಧಿ ನವೋದಯ ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷೆ ಪೂರ್ಣಿಮಾ ಅಂಚನ್‌, ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ. ಗಣೇಶ್‌, ಕೆಎಂಸಿ ಆಸ್ಪತ್ರೆಯ ಪ್ರಾಧ್ಯಾಪಕ ಡಾ. ಜಿ. ಅರುಣ್‌ ಮಯ್ಯ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಗ್ಯಾರೇಜು ಮಾಲೀಕರ ಸಂಘದ ಉಪಾಧ್ಯಕ್ಷ ರೋಶನ್‌ ಕಾಪು ಇದ್ದರು.

ಈ ಸಂದರ್ಭದಲ್ಲಿ ಪರಿವಾರ ಟ್ರಸ್ಟ್‌ ವತಿಯಿಂದ ಸುಮಾರು 1600 ಆರೋಗ್ಯ ಸುರಕ್ಷಾ ಕಾರ್ಡ್‌ಗಳನ್ನು ಜಿಲ್ಲೆಯ ಆಟೊ ಚಾಲಕರಿಗೆ ವಿತರಿಸಲಾಯಿತು. ಸುಮಾರು 100 ಯೂನಿಟ್‌ ರಕ್ತವನ್ನು ಸಂಗ್ರಹಿಸಲಾಯಿತು.ವೆಂಕಟ ಶೆಟ್ಟಿಗಾರ್‌ ಸ್ವಾಗತಿಸಿದರು. ಗ್ಯಾರೇಜು ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಣಿಪಾಲ ಮತ್ತು ಉಮೇಶ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.