ADVERTISEMENT

ರಜತ ಸಂಗೀತ ಮಹೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:40 IST
Last Updated 8 ಫೆಬ್ರುವರಿ 2017, 6:40 IST

ಕಾರ್ಕಳ: ನಗರದ ಮಂಜುನಾಥ ಪೈ ಸರಸ್ವತಿ ಕಲಾ ರಂಗಮಂಟಪದಲ್ಲಿ ಸೋಮವಾರ ಕಾರ್ಕಳ ಶಾಸ್ತ್ರೀಯ ಸಂಗೀತ ಸಭಾದ ರಜತ ವರ್ಷಾಚರಣೆ ಪ್ರಯುಕ್ತ ರಜತ ಸಂಗೀತ ಮಹೋತ್ಸವ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತೆ ಸಂಧ್ಯಾ ಎಸ್.ಪೈ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಂಗೀತಕ್ಕೆ ಮನಸೋಲದವರು, ಸಂಗೀತ ರುಚಿಸದವರು ಯಾರೂ ಇಲ್ಲ. ವಿಜ್ಞಾನಿಗಳು ಮಿಲಿಯಾಂತರ ವರ್ಷಗಳ ಹಿಂದೆ ನಾದದ ಪರಿಣಾಮವನ್ನು ಕಂಡು ಹಿಡಿದಿದ್ದಾರೆ. ಎಲ್ಲರಿಗೂ ಸಂಗೀತ ಎನ್ನುವುದು ಒಂದಲ್ಲ ಒಂದು ಕಾರಣಕ್ಕೆ ಜೀವೋಲ್ಲಾಸ ನೀಡುತ್ತದೆ.

ನಮ್ಮ ಮೈಮನಸ್ಸಿಗೆ ಸ್ಪಂದಿಸುವ ಶಕ್ತಿ ಸಂಗೀತಕ್ಕಿದೆ. ಒಳಗಿನ ನಾದ ಹೊರಗಿನ ನಾದ ಸೇರಿಕೊಂಡು ಅದ್ಭುತವಾದ ಸಂಗೀತವಾಗುತ್ತದೆ. ಮನದ ಶಾಂತತೆಗೂ ಸಂಗೀತವೇ ಸ್ಫೂರ್ತಿ ಎಂದರು.

ಅಧ್ಯಕ್ಷತೆ ವಹಿಸಿದ ಭಾರತ್ ಬೀಡಿ ವರ್ಕ್ಸ್‌ನ ಕಾರ್ಯಕಾರಿ ನಿರ್ದೇಶಕ ಬಿ.ಅನಂತ ಪೈ ಮಾತನಾಡಿ, ಸಂಗೀತದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಸಂಗೀತ ಚಿಕಿತ್ಸೆ ಪ್ರಸ್ತುತ ದಿನಗಳಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಕಾರ್ಕಳದಲ್ಲಿ ಇಂತಹ ಕಾರ್ಯಕ್ರಮ ನಡೆಸಲು ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸದಾ ಪ್ರೋತ್ಸಾಹ ನೀಡಲಾಗುವುದು ಎಂದರು.

ಶಾಸ್ತ್ರೀಯ ಸಂಗೀತ ಸಭಾದ ಅಧ್ಯಕ್ಷ ಎಸ್.ನಿತ್ಯಾನಂದ ಪೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ.ಪ್ರಕಾಶ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತೀ ಶೆಣೈ  ನಿರೂಪಿಸಿದರು. ಪ್ರಭಾಕರ ಪಂಡಿತ್ ಸಹಕರಿಸಿದರು.

ಯುವಪ್ರತಿಭೆ ಬೆಂಗಳೂರಿನ ಶ್ರೀಲತಾ ಅವರ ವೀಣಾವಾದನ, ಗಾಯಕಿ ಬಾಂಬೆ ಜಯಶ್ರೀ ಅವರ ಕರ್ನಾಟಕ ಗಾಯನ ಹಾಗೂ ಕೊಳಲು ಮಾಂತ್ರಿಕ ಪ್ರವೀಣ ಗೋಡ್ಖಿಂಡಿ ಅವರ ಬಾನ್ಸುರಿ ವಾದನ ಪ್ರೇಕ್ಷಕರ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.