ADVERTISEMENT

ವರಂಗ ದೊಡ್ಡ ಪ್ರಮಾಣದ ಅಭಿವೃದ್ಧಿ– ಶಾಸಕ

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:35 IST
Last Updated 25 ಮೇ 2017, 5:35 IST

ಹೆಬ್ರಿ:  ‘ಕಾರ್ಕಳ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನರಹಿತರಿಗೆ ಹಕ್ಕುಪತ್ರ ವಿತರಣೆ, ಅಕ್ರಮ ಸಕ್ರಮ ಅರ್ಜಿ ವಿಲೇವಾರಿ, ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿ ನೆರವೇರಿಸುವ ಮೂಲಕ ಕಾರ್ಕಳ ತಾಲ್ಲೂಕು ರಾಜ್ಯದಲ್ಲೇ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ’ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದರು.

ಮುನಿಯಾಲಿನಲ್ಲಿ  ಮಂಗಳವಾರ ನಡೆದ ವರಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಕಿಂಡಿ ಅಣೆಕಟ್ಟುಗಳಿಗೆ ಶಂಕುಸ್ಥಾಪನೆ, ವಿವಿಧ ಸೌಲಭ್ಯ, ಮನೆ ನಿವೇಶನ ಮಂಜೂರಾತಿ ಪತ್ರ ಮತ್ತು 94 ಸಿ ಹಕ್ಕುಪತ್ರ ವಿತರಣೆ, ಸಮಾಜ ಸೇವಕರಿಗೆ, ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ವರಂಗ ಪಂಚಾಯಿತಿ ವ್ಯಾಪ್ತಿಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ಮಾತಿಬೆಟ್ಟಿನ ಹೊಳೆ  ಕಿಂಡಿ ಅಣೆಕಟ್ಟು, ₹ 1.20 ಕೋಟಿ ವೆಚ್ಚದಲ್ಲಿ ಮೂಡುಕುಡೂರಿನ ಸೀತಾನದಿ ಕಿಂಡಿ ಅಣೆಕಟ್ಟಿಗೆ ಶಂಕುಸ್ಥಾಪನೆ, ₹ 10 ಲಕ್ಷ ವೆಚ್ಚದಲ್ಲಿ ವರಂಗ ಹಿತ್ಲುಕೊಟ್ಟಿಗೆ ರಸ್ತೆ ಕಾಂಕ್ರಿಟೀಕರಣಕ್ಕೆ  ಶಾಸಕ ಸುನಿಲ್ ಕುಮಾರ್  ಚಾಲನೆ ನೀಡಿದರು.

ಉದ್ಘಾಟನೆ:  ₹ 2.17 ಕೋಟಿ ವೆಚ್ಚದಲ್ಲಿ  ವರಂಗದ ತಲಮನೆ ರಸ್ತೆ ಮತ್ತು ಸೇತುವೆ, ಮುಟ್ಲುಪಾಡಿಯಲ್ಲಿ ₹8 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕುಡಿಯುವ ನೀರಿನ ಟ್ಯಾಂಕ್ ಮತ್ತು ಗ್ರಾಮ ವಿಕಾಸ ಯೋಜನೆಯಡಿ  ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಮುಟ್ಲಪಾಡಿ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಲಾಯಿತು.

ವರಂಗ ಪಂಚಾಯಿತಿ ಬಳಿ ₹12 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ಎಸ್‍ಟಿ ಕಾಲೊನಿ ರಸ್ತೆ , ಮುದೆಲ್ಕಡಿಯ 5 ಸೆಂಟ್ಸ್ ಕಾಲೊನಿಯಲ್ಲಿ ₹11 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕುಡಿಯುವ ನೀರಿನ ಟ್ಯಾಂಕ್ ಮತ್ತು ಪೈಪ್‌ ಲೈನ್ ಉದ್ಘಾಟನೆ ನಡೆಯಿತು.

8 ಫಲಾನುಭವಿಗಳಿಗೆ 94 ಸಿ ಹಕ್ಕುಪತ್ರ, ಬಸವ ವಸತಿ ಮತ್ತು ಇಂದಿರಾ ಆವಾಜ್ ಯೋಜನೆಯಡಿ 55 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ, ವಿವಿಧ ಸವಲತ್ತುಗಳ ವಿತರಣೆ, ಮುನಿಯಾಲು ಶಾಲೆಯ ಎಸ್ಸೆಸ್ಸೆಲ್‍ಸಿ ಸಾಧಕರಿಗೆ ಮತ್ತು ಸಮಾಜಸೇವಕ ಶಂಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ವರಂಗ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿಯನ್ನು ನಡೆಸಿದ ಶಾಸಕ ಸುನಿಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ವರಂಗ ಪಂಚಾಯಿತಿ ಅಧ್ಯಕ್ಷ ಸುರೇಂದ್ರ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು.

ಬಿಜೆಪಿ ಮುಖಂಡ ದಿನೇಶ್ ಪೈ, ಕಾರ್ಕಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಹರೀಶ್ ಪೂಜಾರಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಲತಾ ನಾಯ್ಕ್, ಶಿವಪುರ ರಮೇಶ್ ಪೂಜಾರಿ, ಕ್ಯಾಂಪ್ಕೊ ನಿರ್ದೇಶಕ ದಯಾನಂದ ಹೆಗ್ಡೆ, ಎಪಿಎಂಸಿ ಅಧ್ಯಕ್ಷ ಮುಟ್ಲಪಾಡಿ ಸತೀಶ್ ಶೆಟ್ಟಿ, ಅರುಣ್ ಕುಮಾರ್ ಹೆಗ್ಡೆ ಕಡ್ತಲ, ಪಂಚಾಯಿತಿ ಉಪಾಧ್ಯಕ್ಷ ದಿನೇಶ್ ರಾವ್ ಅಂಡಾರು,  ಗ್ರಾಮ ಪಂಚಾಯಿತಿ ಸದಸ್ಯರು, ಸಮೃದ್ಧಿ ಪ್ರಕಾಶ್, ಆನಂದ ಪೂಜಾರಿ, ಪಿಡಿಒ ಸದಾಶಿವ ಸೇರ್ವೇಗಾರ್, ಶಂಕರ ಶೆಟ್ಟಿ  ಉಪಸ್ಥಿತರಿದ್ದರು. ರತ್ನಾಕರ ಪೂಜಾರಿ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT