ADVERTISEMENT

ವಿದ್ಯಾದಾನ ಶ್ರೇಷ್ಠ: ವಿದ್ಯಾವಲ್ಲಭ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 5:23 IST
Last Updated 1 ಸೆಪ್ಟೆಂಬರ್ 2014, 5:23 IST

ಉಡುಪಿ: ‘ವ್ಯಕ್ತಿಯನ್ನು ಶಾಶ್ವತವಾಗಿ ಎತ್ತರಕ್ಕೆ ಕೊಂಡೊಯ್ಯುವ ವಿದ್ಯಾ ದಾನವು ವಸ್ತುರೂಪದಲ್ಲಿ ನೀಡುವ ದಾನಕ್ಕಿಂತ ಮಹತ್ತರವಾದುದು’ ಎಂದು ಪರ್ಯಾಯ ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ ಹೇಳಿದರು.

ಶ್ರೀಕೃಷ್ಣ ಮಠ, ಪರ್ಯಾಯ ಕಾಣಿಯೂರು ಮಠ, ವಿದ್ಯಾಪೋಷಕ್‌ ಮತ್ತು ಯಕ್ಷಗಾನ ಕಲಾರಂಗ ಸಂಯುಕ್ತವಾಗಿ ಉಡುಪಿಯ ರಾಜಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ವಿನಮ್ರ ಸಹಾಯ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಡ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಮೂಲಕ ಯಕ್ಷಗಾನ ಕಲಾರಂಗ ಅತ್ಯಂತ ಸಂಗತವಾದ ಕೆಲಸ ಮಾಡುತ್ತಿದೆ. ಸಹಾಯ ನೀಡಿದ ಸಂಸ್ಥೆಯನ್ನು ವಿದ್ಯಾರ್ಥಿಗಳು ಸದಾ ಸ್ಮರಣೆ ಮಾಡಬೇಕು ಎಂದರು.

ವಿದ್ಯಾಪೋಷಕ್‌ ವತಿಯಿಂದ 960 ಪ್ರತಿಭಾವಂತ ವಿದ್ಯಾರ್ಥಿಗಳಿಗೆ 55 ಲಕ್ಷ ರೂಪಾಯಿ ಸಹಾಯ ಧನವನ್ನು ವಿತರಣೆ ಮಾಡಲಾಯಿತು.ಉನ್ನತ ವ್ಯಾಸಂಗ ಮಾಡುತ್ತಿರುವ ಸುಶ್ಮಿತಾ ಮೊಗವೀರ ಮತ್ತು ಶರತ್‌ ಪೂಜಾರಿ ಅವರಿಗೆ ದಾನಿಗಳು ನೀಡಿದ ಲ್ಯಾಪ್‌ಟಾಪ್‌ ವಿತರಿಸಲಾಯಿತು.

ಉದ್ಯಮಿ ಡಾ.ಜಿ.ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ರಘುಪತಿ ಭಟ್‌, ಉದ್ಯಮಿಗಳಾದ ಕೆ.ಪ್ರಕಾಶ್‌ ಶೆಟ್ಟಿ, ಜೆರ್ರಿ ವಿನ್ಸೆಂಟ್‌ ಡಯಾಸ್‌, ಆನಂದ ಪಿ ಸುವರ್ಣ, ಭುವನೇಂದ್ರ ಕಿದಿಯೂರು, ಪುರುಷೋತ್ತಮ ಪಿ ಶೆಟ್ಟಿ, ಮಂಗಳೂರು ಪ್ರೇರಣಾ ಇನ್ಫೋಸಿಸ್‌ನ ರವಿರಾಜ್‌ ಬೆಳ್ಮ, ಮಂಗಳೂರು ವಿಶ್ವಕೊಂಕಣಿ ಸ್ಟೂಡೆಂಟ್‌್ಸ ಸ್ಕಾಲರ್‌ಶಿಪ್‌ ಫಂಡ್‌ನ ಗಿರಿಧರ ಕಾಮತ್‌, ಕಾಪು ವಿನೋದಾ ಚಂದ್ರಶೇಖರ ಶೆಟ್ಟಿ ಫೌಂಡೇಶನ್‌ನ ದಯಾನಂದ ಶೆಟ್ಟಿ, ಕೋಟ ಮಣೂರು ಗೀತಾನಂದ ಫೌಂಡೇಶನ್‌ ಅಧ್ಯಕ್ಷ ಆನಂದ ಪಿ ಕುಂದರ್‌ ಉಪಸ್ಥಿತರಿದ್ದರು.

ಪ್ರೊ.ನಾರಾಯಣ ಎಂ ಹೆಗಡೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಯಕ್ಷಗಾನ ಕಲಾ­ರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು.ಕಾರ್ಯದರ್ಶಿ ಮುರಲಿ ಕಡೇಕಾರ್‌ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ವಿಧಾನ ಪರಿಷತ್‌ ಸದಸ್ಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಚಿಂತನ ಶಿಬಿರ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.