ADVERTISEMENT

ವಿದ್ಯಾರ್ಥಿಗಳಿಂದ ಸಮಾಜದ ಬದಲಾವಣೆ

ಪ್ರೊ. ಎನ್‌. ಮನು ಚಕ್ರವರ್ತಿ ಪುಸ್ತಕ ಬಿಡುಗಡೆ ಮಾಡಿದ ವೈದೇಹಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2016, 4:39 IST
Last Updated 21 ಏಪ್ರಿಲ್ 2016, 4:39 IST
ಮಣಿಪಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಮರ್ಶಕ ಪ್ರೊ. ಎನ್‌. ಮನು ಚಕ್ರವರ್ತಿ ಅವರ ‘ಮೂವಿಂಗ್‌ ಇಮೇಜಸ್‌, ಮಲ್ಟಿಪಲ್‌ ರಿಯಾಲಿಟಿಸ್‌’ ಪುಸ್ತಕವನ್ನು ಲೇಖಕಿ ವೈದೇಹಿ ಬಿಡುಗಡೆ ಮಾಡಿದರು. ಪ್ರಜಾವಾಣಿ ಚಿತ್ರ
ಮಣಿಪಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಮರ್ಶಕ ಪ್ರೊ. ಎನ್‌. ಮನು ಚಕ್ರವರ್ತಿ ಅವರ ‘ಮೂವಿಂಗ್‌ ಇಮೇಜಸ್‌, ಮಲ್ಟಿಪಲ್‌ ರಿಯಾಲಿಟಿಸ್‌’ ಪುಸ್ತಕವನ್ನು ಲೇಖಕಿ ವೈದೇಹಿ ಬಿಡುಗಡೆ ಮಾಡಿದರು. ಪ್ರಜಾವಾಣಿ ಚಿತ್ರ   

ಉಡುಪಿ: ವಿದ್ಯೆಯ ಮೂಲಕ ವಿದ್ಯಾರ್ಥಿಗಳಿಗೆ ಜ್ಞಾನ ನೀಡುವುದರ ಜೊತೆಗೆ ಮನಸ್ಸಿನ ನೆಲೆಗೆ ಬೇಕಾದ ಆಹಾರ ಒದಗಿಸುವುದು ಸಹ ಮುಖ್ಯ ಎಂದು ಲೇಖಕಿ ವೈದೇಹಿ ಅಭಿಪ್ರಾಯಪಟ್ಟರು.

ಮಣಿಪಾಲ್‌ ವಿಶ್ವವಿದ್ಯಾಲಯ ವಿ.ವಿಯ ಇಂಟರ್‍ಯಾಕ್ಟ್‌ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ‘ಸೃಜನಶೀಲತೆ ಹಾಗೂ ಸಾಂಸ್ಕೃತಿಕ ಅಧ್ಯಯನ ಕೇಂದ್ರ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಕೃತಿ ವಿಮರ್ಶಕ ಪ್ರೊ. ಎನ್‌. ಮನು ಚಕ್ರವರ್ತಿ ಅವರ ‘ಮೂವಿಂಗ್‌ ಇಮೇಜಸ್‌, ಮಲ್ಟಿಪಲ್‌ ರಿಯಾಲಿಟಿಸ್‌’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಮಾಜವನ್ನು ಜನಪರವಾಗಿ ಬದಲಾಯಿಸುವ ಪ್ರಕ್ರಿಯೆ ವಿದ್ಯಾರ್ಥಿಗಳಿಂದಲೇ ಆರಂಭವಾಗಬೇಕು. ಆ ಮೂಲಕವೇ ಮನಸ್ಸನ್ನು ಸ್ವಚ್ಛಗೊಳಿಸಬೇಕು ಎಂದು ಹೇಳಿದರು.

ಮನುಚಕ್ರವರ್ತಿ ಸಿದ್ಧಾಂತವನ್ನು ಹುಟ್ಟು ಹಾಕುವ ಚಿಂತಕರಾಗಿದ್ದಾರೆ. ಹೊಸ ಚಿಂತನಾ ಕ್ರಮಕ್ಕೆ ಚಾಲನೆ ನೀಡುವ ಶಕ್ತಿ ಅವರಿಗಿದೆ. ಇಲ್ಲಿನ ವಾಸ್ತವ ಮತ್ತು ತಾಪತ್ರಯಗಳು ಪಾಶ್ಚಾತ್ಯರಿಗೆ ಅರ್ಥವಾಗದು. ಆದ್ದರಿಂದ ನಮ್ಮ ಸಾಹಿತ್ಯ ಹಾಗೂ ನಮ್ಮ ಸಿನಿಮಾದ ಬಗ್ಗೆ ನಮ್ಮದೇ ಆದ ಮೀಮಾಂಸೆ ಕಟ್ಟಬೇಕಿದೆ. ಇದೇ ಹಾದಿಯಲ್ಲಿ ಮನು ಅವರು ಹೊರಟ್ಟಿದ್ದಾರೆ ಎಂದರು.

ಪುಸ್ತಕದ ಬಗ್ಗೆ ಮಾತನಾಡಿದ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ವರದೇಶ್‌ ಹಿರೇಗಂಗೆ, ಒಟ್ಟು 20 ಪ್ರಬಂಧಗಳನ್ನು ಈ ಪುಸ್ತಕ ಒಳಗೊಂಡಿದೆ. ಇದರಲ್ಲಿ ಕೇವಲ ಸಿನಿಮಾಗಳ ವಿಮರ್ಶೆ ಇಲ್ಲ. ವಿಮರ್ಶೆಯ ವಿಶ್ಲೇಷಣೆಯೂ ಇದೆ. ಸಿನಿಮಾ ಟ್ರೆಂಡ್‌ ಬಗ್ಗೆ ಅವರ ದೃಷ್ಟಿಕೋನವನ್ನು ಹೇಳಿದ್ದಾರೆ. ಒಂದು ಚಿತ್ರದಲ್ಲಿ ಹಲವು ವಾಸ್ತವಗಳು ಇರಬಹುದು ಎಂಬುದನ್ನು ಪುಸ್ತಕದ ಶೀರ್ಷಿಕೆಯೇ ಹೇಳುತ್ತದೆ ಎಂದರು.

ಅವರ ಪ್ರಬಂಧಗಳನ್ನು ನೋಡಿದಾಗ ಅವರು ಮುಖ್ಯವಾಹಿನಿಯ ಸಿನಿಮಾಗಳನ್ನು ನೋಡುತ್ತಾರೆ ಎಂಬುದು ಗೊತ್ತಾಗುತ್ತದೆ. ಆ ಸಿನಿಮಾಗಳ ಬಗ್ಗೆಯೂ ಅವರು ಅಭಿಪ್ರಾಯ ತಿಳಿಸಿದ್ದಾರೆ. ಕಾಸರವಳ್ಳಿ ಅವರ ಐದು ಸಿನಿಮಾಗಳ ಬಗ್ಗೆ ವಿಮರ್ಶೆ ಇದೆ. ಆ ಸಿನಿಮಾಗಳ ಬಗ್ಗೆ ಹೆಚ್ಚು ಬರೆದಿದ್ದಾರೆ. ಸಿನಿಮಾ ವಿಷಯ ಓದುವ ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕ ಇದಾಗಿದೆ ಎಂದು ಅಭಿಪ್ರಾಯಪಟ್ಟರು.

ಸೃಜನಶೀಲತೆ ಹಾಗೂ ಸಾಂಸ್ಕೃತಿಕ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಮಣಿಪಾಲ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ವಿನೋದ್ ಭಟ್‌ ಮಾತನಾಡಿ, 2020ರ ವೇಳೆಗೆ ಒಟ್ಟು 100 ಇಂತಹ ವಿಭಿನ್ನ ಕೇಂದ್ರಗಳನ್ನು ಆರಂಭಿಸುವ ಯೋಚನೆ  ಇದೆ. ಆಗಸ್ಟ್‌ ತಿಂಗಳ ವೇಳೆಗೆ 50 ಕೇಂದ್ರಗಳು ಉದ್ಘಾಟನೆ ಆಗಲಿವೆ. ಎಂದರು.

ಸ್ಕೂಲ್ ಆಫ್‌ ಕಮ್ಯೂನಿಕೇಷನ್‌ನ ನಿರ್ದೇಶಕಿ ಡಾ. ನಂದಿನಿ ಲಕ್ಷ್ಮೀಕಾಂತ ಉಪಸ್ಥಿತರಿದ್ದರು. ಶಾರಿಮಾ ಪ್ರಾರ್ಥನೆ ಮಾಡಿದರು. ಸೃಜನಶೀಲತೆ ಹಾಗೂ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಉನ್ನಿಕೃಷ್ಣನ್‌ ಸ್ವಾಗತಿಸಿದರು.

*
ಈಶಾನ್ಯ ರಾಜ್ಯಗಳ ಅಧ್ಯಯನ ವಿಭಾಗವನ್ನು ಈಗಾಗಲೇ ಆರಂಭಿಸಲಾಗಿದೆ. ಕಲೆ ಹಾಗೂ ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ
ಡಾ. ವಿನೋದ್ ಭಟ್‌
ಮಣಿಪಾಲ ವಿಶ್ವವಿದ್ಯಾಲಯದ  ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT