ADVERTISEMENT

ವಿದ್ಯಾರ್ಥಿಗಳು ‘ಹಿಂದೂ ವೈಭವ’ ವೀಕ್ಷಿಸುವಂತೆ ಡಿಸಿಪಿಐ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 8:50 IST
Last Updated 24 ನವೆಂಬರ್ 2017, 8:50 IST

ಉಡುಪಿ: ವಿಶ್ವ ಹಿಂದೂ ಪರಿಷತ್ ಏರ್ಪಡಿಸಿರುವ ‘ಹಿಂದೂ ವೈಭವ’ ಪ್ರದರ್ಶನವನ್ನು ಶಾಲಾ ವಿದ್ಯಾರ್ಥಿಗಳು ವೀಕ್ಷಿಸಲು ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹೊರಡಿಸಿದ್ದ ಸುತ್ತೋಲೆಯನ್ನು ವಾಪಸ್ ಪಡೆದಿದ್ದಾರೆ.

ಒಂದು ರಾಜಕೀಯ ಪಕ್ಷದ ಪರವಾಗಿರುವ ಹಾಗೂ ಒಂದು ಸಿದ್ಧಾಂತವನ್ನು ಪ್ರತಿಪಾದಿಸುವ ಸಂಘಟನೆ ಆಯೋಜಿಸಿರುವ ವಸ್ತು ಪ್ರದರ್ಶನಕ್ಕೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವುದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಹಿಂದಕ್ಕೆ ಪಡೆಯಲಾಗಿದೆ.

‘ವಸ್ತು ಪ್ರದರ್ಶನ ಎಂಬ ಕಾರಣಕ್ಕೆ ಶಾಲಾ ವಿದ್ಯಾರ್ಥಿಗಳಿಗೆ ಹೋಗಲು ಅವಕಾಶ ಕಲ್ಪಿಸುವಂತೆ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಅದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಯಿತು. ‘ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಏರ್ಪಡಿಸುವ ವಸ್ತು ಪ್ರದರ್ಶನಕ್ಕೂ ಶಾಲಾ ಮಕ್ಕಳನ್ನು ಕಳುಹಿಸಿತ್ತೀರ’ ಎಂದು ಕೆಲವರು ಪ್ರಶ್ನಿಸಿದರು. ಆದ್ದರಿಂದ ಅದನ್ನು ವಾಪಸ್ ಪಡೆಯಲಾಗಿದೆ’ ಎಂದು ಡಿಡಿಪಿಐ ಶೇಷಶಯನ ‘ಪ್ರಜಾವಾಣಿ’ಗೆ ತಿಳಿಸಿದರು. ‘ಶಾಲಾ ಮಕ್ಕಳಿಗೆ ವಸ್ತುಪ್ರದರ್ಶನ ವೀಕ್ಷಿಸಲು ಅವಕಾಶ ನೀಡಿ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಸಹ ಹೇಳಿದ್ದರು’ ಎಂದು ಅವರು ಹೇಳಿದರು.

ADVERTISEMENT

‘ವಿದ್ಯಾರ್ಥಿಗಳ ವಸ್ತು ಪ್ರದರ್ಶನ ವೀಕ್ಷಿಸಲಿ ಎಂಬ ಕಾರಣಕ್ಕೆ ಸುತ್ತೋಲೆ ಹೊರಡಿಸುವಂತೆ ಡಿಡಿಪಿಐ ಅವರಿಗೆ ಹೇಳಿದ್ದೆ. ಅವರು ಅದನ್ನು ಹಿಂದಕ್ಕೆ ಪಡೆದಿದ್ದಾರೆ ಎಂದು ಈಗ ತಿಳಿದು ಬಂದಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಹೇಳಿದರು.

ಧರ್ಮ ಸಂಸತ್ ಸಮ್ಮೇಳನದಲ್ಲಿ ಅಂಗವಾಗಿ ‘ಹಿಂದೂ ವೈಭವ’ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಹಿಂದೂ ಧರ್ಮಗ್ರಂಥ, ರಾಜರು, ಸಂಗೀತ, ಕಲೆ, ವಿಶ್ವ ಹಿಂದೂ ಪರಿಷತ್‌, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಅಲ್ಲಿ ಮಾಹಿತಿ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.