ADVERTISEMENT

ವಿಮೆ ದರ ಏರಿಕೆ ವಿರುದ್ಧ 30 ರಂದು ಮುಷ್ಕರ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 5:37 IST
Last Updated 20 ಮಾರ್ಚ್ 2017, 5:37 IST

ಉಡುಪಿ: ಲಾರಿ, ಬಸ್‌, ಟ್ಯಾಕ್ಸಿಗಳ ವಿಮೆ ದರ ಏರಿಕೆ ವಿರೋಧಿಸಿ ಹಾಗೂ ಈಗಾಗಲೇ ನಿರ್ಮಾಣ ವೆಚ್ಚ ಮತ್ತು ಲಾಭಗಳಿಸಿರುವ ಟೋಲ್‌ಗಳನ್ನು ರದ್ದು ಮಾಡಬೇಕು.

ರಾಜ್ಯದ 30 ಕಡೆಗಳಲ್ಲಿ ರಾಜ್ಯ ಹೆದ್ದಾರಿ ಗಳಿಗೆ ಟೋಲ್‌ ಹಾಕುವ ರಾಜ್ಯ ಸರ್ಕಾರದ ನಿರ್ಧಾರ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೌತ್‌ ಜೋನ್‌ ಮೋಟಾರ್‌ ಟ್ರಾನ್ಸ್‌ ಪೋರ್ಟ್‌ ವೆಲ್‌ಫೇರ್‌ ಅಸೋಸಿ ಯೇಶನ್‌ ಇತರೆ ಸಹಭಾಗಿತ್ವ ಸಂಘಟನೆಗಳ ಸಹಯೋಗ ದಲ್ಲಿ ಇದೇ 30ರಿಂದ ದಕ್ಷಿಣ ಭಾರತ ದಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು  ಅಸೋ ಸಿಯೇಶನ್‌ ರಾಜ್ಯ ನಾಯಕ ಜಿ.ಆರ್‌. ಷಣ್ಮುಗಪ್ಪ ಭಾನುವಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

ಏಪ್ರಿಲ್‌ 1ರಿಂದ ವಿಮೆ ಕಂಪೆನಿಗಳು ಥರ್ಡ್‌ ಪಾರ್ಟಿ ಪ್ರೀಮಿಯಂ ದರ ಹೆಚ್ಚಳ ಮಾಡಲು ಮುಂದಾಗಿದ್ದು, ಇದರಿಂದ ಲಾರಿ, ಬಸ್‌, ಟ್ಯಾಕ್ಸಿ ಮಾಲೀಕರು ದುಪ್ಪಟ್ಟು ವಿಮೆ ದರ  ಭರಿಸಬೇಕಾ ಗುತ್ತದೆ. ಈಗಾಗಲೇ ತೆರಿಗೆ, ಟೋಲ್‌ ಶುಲ್ಕ ಇತ್ಯಾದಿ ಪಾವತಿಸುತ್ತಿರುವ ಮಾಲೀಕರಿಗೆ ವಿಮೆ ದರ ಹೆಚ್ಚಳವು ಇನ್ನಷ್ಟು ಆರ್ಥಿಕ ಹೊರೆಯಾಗಲಿದೆ. ಹಾಗಾಗಿ ಈ ನಿರ್ಧಾರವನ್ನು ಕೇಂದ್ರ ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.

ಹಾಗೆಯೇ ಉಡುಪಿ ಜಿಲ್ಲೆಯ ಎರಡು ಟೋಲ್‌ಗೇಟ್‌ಗಳಲ್ಲಿ ಉಡುಪಿ ನೋಂದಣಿ ವಾಣಿಜ್ಯ ವಾಹನಗಳಿಗೆ ಟೋಲ್‌ನಿಂದ ಕೈಬಿಡಬೇಕು. 15 ವರ್ಷದ ಹಳೆಯ ವಾಣಿಜ್ಯ ವಾಹನ ಗಳನ್ನು ಸ್ಕ್ರಾಪ್‌ ಮಾಡುವ ನಿರ್ಧಾರ ವನ್ನು ಹಿಂಪಡೆಯಬೇಕು. ವಾಹನಗಳಿಗೆ ವೇಗ ನಿಯಂತ್ರಣ ಅಳವಡಿಸಲು ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದರು.

ಕೇಂದ್ರ ಮೋಟಾರ್‌ ಕಾಯ್ದೆ 1989 ನಿಯಮಕ್ಕೆ ತಿದ್ದುಪಡಿ ತಂದು, ಸಾರಿಗೆ ಇಲಾಖೆ ಶುಲ್ಕವನ್ನು ಹೆಚ್ಚಳ ಮಾಡುವುದನ್ನು ಕೈಬೀಡಬೇಕು. ದಕ್ಷಿಣ ಭಾರತದ ಎಲ್ಲ ಪ್ರವಾಸಿ ವಾಹನಗಳಿಗೆ ಏಕರೂಪದ ನೋಂದಣಿ ತೆರಿಗೆ ವಿಧಿಸಬೇಕು. ಖಾಸಗಿ ಸಾರಿಗೆ ಮಾರ್ಗದಲ್ಲಿ ಸರ್ಕಾರಿ ಬಸ್‌ಗಳನ್ನು ಓಡಿಸುವ ಸರ್ಕಾರದ ನಿರ್ಧಾರವನ್ನು ಪುನರ ಪರಿಶೀಲಿಸಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಈ ಹೋರಾಟಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಮತ್ತು ಏಜೆಂಟ್‌ಗಳ ಅಸೋಸಿಯೇಶನ್‌, ಕರ್ನಾಟಕ ಟ್ಯಾಕ್ಸಿ ಮತ್ತು ಟ್ಯಾಕ್ಸಿ ಕ್ಯಾಬ್‌ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಬಸ್‌ ಮಾಲೀಕರ ಒಕ್ಕೂಟ ಬೆಂಬಲ ಸೂಚಿಸಿದ್ದು, ಅಂದು ಲಾರಿ, ಬಸ್‌, ಟೆಂಪೊ, ಟ್ಯಾಕ್ಸಿಗಳು ರಸ್ತೆಗೆ ಇಳಿಯುವುದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.