ADVERTISEMENT

ವಿವಿಧ ಬೇಡಿಕೆ: ಬ್ಯಾಂಕ್ ನೌಕರರ ಪ್ರತಿಭಟನೆ

ಬ್ಯಾಂಕ್‌ಗಳ ವಿಲೀನ ವಿರೋಧಿಸಿ, ವೇತನ ಪರಿಷ್ಕರಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2017, 5:37 IST
Last Updated 1 ಮಾರ್ಚ್ 2017, 5:37 IST

ಉಡುಪಿ: ಬ್ಯಾಂಕ್‌ಗಳ ವಿಲೀನ ವಿರೋಧಿಸಿ, ವೇತನ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಹಾಗೂ ಅಧಿಕಾರಿಗಳ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಗರದ ಸಿಂಡಿಕೇಟ್‌ ಬ್ಯಾಂಕ್‌ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು.

ಬ್ಯಾಂಕ್‌ಗಳ ಖಾಸಗೀಕರಣ ಬೇಡ, ಗುತ್ತಿಗೆ ನೌಕರರ ನೇಮಕ ಬೇಡ ಹಾಗೂ ಬೇಡಿಕೆಗಳನ್ನು ಈಡೇರಿಸಿ ಎಂದು ಪ್ರತಿಭ ಟನಾಕಾರರು ಘೋಷಣೆ ಕೂಗಿದರು.

ಬ್ಯಾಂಕ್‌ ನೌಕರರು ಹಾಗೂ ಅಧಿಕಾರಿಗಳ ಸಂಘದ ಅಧ್ಯಕ್ಷ ರಾಮ್‌ ಮೋಹನ್ ಮಾತನಾಡಿ, ಬ್ಯಾಂಕ್‌ ನೌಕರರ ಬೇಡಿಕೆಗಳ ಈಡೇರಿಕೆ ಬಗ್ಗೆ ಭಾರತೀಯ ಬ್ಯಾಂಕ್‌ಗಳ ಸಂಘ ಹಾಗೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ₹10 ಲಕ್ಷ ಇದ್ದ ಕೇಂದ್ರ ಸರ್ಕಾರಿ ನೌಕರರ ಗ್ರಾಚ್ಯುಯಿಟಿ ಮಿತಿಯನ್ನು 2016 ನ. 1ರಿಂದ ಅನ್ವಯಿಸಿ ₹20 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

ಇದನ್ನು ಬ್ಯಾಂಕ್‌ ನೌಕರ ರಿಗೂ ನೀಡಿ ಎಂದು ಹಲವು ಬಾರಿ ಮನವಿ ಮಾಡಿದರೂ ಪ್ರಯೋ ಜನ ಆಗಿಲ್ಲ. ಬ್ಯಾಂಕ್‌ಗಳ ಮಾಲೀಕರಿಗೆ ಅನು ಕೂಲ ಮಾಡಿಕೊಡಲು ಟ್ರೇಡ್‌ ಯೂನಿ ಯನ್‌ ಕಾನೂನುಗಳಿಗೆ ತಿದ್ದುಪಡಿ ತರುತ್ತಿದ್ದಾರೆ ಎಂದು ಆರೋಪಿಸಿದರು.

ಸ್ಟೇಟ್ ಬ್ಯಾಂಕ್‌ ಆಫ್‌ ಮೈಸೂರು, ಸ್ಟೇಟ್‌ ಬ್ಯಾಂಕ್ ಆಫ್‌ ಬಿಕನೇರ್‌– ಜೈಪುರ್‌, ಸ್ಟೇಟ್‌ ಬ್ಯಾಂಕ್ ಆಫ್ ತಿರು ವಾಂಕೂರ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಪಟಿಯಾಲ, ಸ್ಟೇಟ್ ಬ್ಯಾಂಕ್‌ ಆಫ್‌ ಹೈದರಾಬಾದ್‌ ಅನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆಗೆ ಏಪ್ರಿಲ್ 1ರಿಂದ ವಿಲೀನ ಮಾಡಲು ಹೊರಟ್ಟಿದ್ದಾರೆ.

ಇದಕ್ಕೆ ತೀವ್ರ ವಿರೋಧ ವ್ಯಕ್ತವಾದರೂ ಕೇಂದ್ರ ಸರ್ಕಾರ ಮಾತ್ರ ತನ್ನ ನಿಲುವಿಗೆ ಆಂಟಿಕೊಂಡಿದೆ. ಹಲವಾರು ವರ್ಷಗ ಳಿಂದ ಈ ಬ್ಯಾಂಕ್‌ಗಳು ಸ್ಥಳೀಯವಾಗಿ ಉತ್ತಮ ಬ್ಯಾಂಕಿಂಗ್ ಸೇವೆ ನೀಡುತ್ತಿವೆ. ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿವೆ, ಅಂತಹ ಬ್ಯಾಂಕ್‌ಗಳನ್ನು ವಿಲೀನ ಮಾಡುವುದು ಸರಿಯಲ್ಲ ಎಂದರು.

ವೇತನ ಪರಿಷ್ಕರಣೆ ಮಾಡಿ ಹಲವಾರು ವರ್ಷಗಳಾಗಿವೆ. ಅಲ್ಲದೆ ಕುಟುಂಬ ಪಿಂಚಣಿ ಪ್ರಮಾಣವನ್ನೂ ಏರಿಕೆ ಮಾಡಿಲ್ಲ. ಕೇಂದ್ರ ಸರ್ಕಾರಿ ನೌಕರರಿಗೆ ಶೇ 30ರಷ್ಟು ಕುಟುಂಬ ಪಿಂಚಣಿ ಇದ್ದರೆ, ಬ್ಯಾಂಕ್‌ ನೌಕರರಿಗೆ ಕೇವಲ ಶೇ15ರಷ್ಟು ನೀಡಲಾಗುತ್ತಿದೆ. ಇದರಿಂದಾಗಿ ಬ್ಯಾಂಕ್‌ ನೌಕರರಿಗೆ ಅನ್ಯಾಯವಾಗುತ್ತಿದೆ.

ವಸೂಲಾಗದ ಸಾಲ ಬ್ಯಾಂಕ್‌ಗಳಿಗೆ ಹೊರೆಯಾಗಿದ್ದು ಅದನ್ನು ವಸೂಲಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಲ್ಲದೆ ಉದ್ದೇಶಪೂರ್ವಕ ಸುಸ್ತಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.

ಸರ್ಕಾರ ನಮ್ಮ ಬೇಡಿಕೆ ಈಡೇರಿಕೆಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಹೆರಾಲ್ಡ್ ಡಿಸೋಜ, ಮುಖಂಡರಾದ ಜಯಪ್ರಕಾಶ್ ರಾವ್, ಹೇಮಂತ್ ಯು ಕಾಂತ್‌, ಎ. ರವೀಂದ್ರ, ಕೆ.ಆರ್‌. ಶೆಣೈ, ಪ್ರಕಾಶ್ ಜೋಗಿ, ಸಿಂಡಿಕೇಟ್ ಬ್ಯಾಂಕ್ ನೌಕರರ ಸಂಘದ ರವಿಕುಮಾರ್‌, ಕೆನರಾ ಬ್ಯಾಂಕ್‌ ನೌಕರರ ಸಂಘದ ವರದರಾಜ್, ಕರ್ನಾಟಕ ಬ್ಯಾಂಕ್‌ ನೌಕರರ ಸಂಘಟನೆಯ ನಿತ್ಯಾನಂದ, ಅಧಿಕಾರಿ ಸಂಘಟನೆಯ ಮಾಧವ ಭಟ್‌, ಕಾರ್ಪೋರೇಷನ್ ಬ್ಯಾಂಕ್‌ ಸಂಘಟನೆಯ ರಘುರಾಮ ಕೃಷ್ಣ ಬಲ್ಲಾಳ್‌, ಜಯನ್‌ ಮಲ್ಪೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.