ADVERTISEMENT

ಶಾಸಕರ ನಿಷ್ಕ್ರಿಯತೆ: ಅಭಿವೃದ್ಧಿ ಮರೀಚಿಕೆ

ಅನುದಾನ ಪಟ್ಟಿ ಪ್ರಕಟಿಸಲು ಮಾಜಿ ಶಾಸಕ ರಘುಪತಿ ಭಟ್‌ ಆಗ್ರಹ

ಪ್ರಜಾವಾಣಿ ಚಿತ್ರ
Published 11 ಫೆಬ್ರುವರಿ 2016, 6:56 IST
Last Updated 11 ಫೆಬ್ರುವರಿ 2016, 6:56 IST
ಮಾಜಿ ಶಾಸಕ ಕೆ. ರಘುಪತಿ ಭಟ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮಾಜಿ ಶಾಸಕ ಕೆ. ರಘುಪತಿ ಭಟ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.   

ಉಡುಪಿ: ಶಾಸಕ ಪ್ರಮೋದ್ ಮಧ್ವ ರಾಜ್ ಅವರ ನಿಷ್ಕ್ರಿಯತೆಯಿಂದಾಗಿ ಉಡುಪಿ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ವಂಚಿತವಾಗಿದೆ. ಕ್ಷೇತ್ರಕ್ಕೆ ₹1320 ಕೋಟಿ ಅನುದಾನ ತಂದಿದ್ದೇನೆ ಎಂದು ಸುಳ್ಳು ಹೇಳುತ್ತಿರುವ ಶಾಸಕರು ಅನುದಾನದ ಪಟ್ಟಿಯನ್ನು ಬಿಡುಗಡೆ ಮಾಡಲಿ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್‌ ಸವಾಲು ಹಾಕಿದರು.

“ನನ್ನ ಅವಧಿಯಲ್ಲಿ ಮಂಜೂರಾದ ಯೋಜನೆಗಳು, ಕೇಂದ್ರ ಸರ್ಕಾರದ ಸಿಆರ್‌ಎಫ್‌, ಗ್ರಾಮೀಣ ಸಡಕ್‌ ಮುಂತಾದ ಯೋಜನೆಗಳ ಅನುದಾನವನ್ನು ಬಿಟ್ಟು ಶಾಸಕರೇ ಮುತುವರ್ಜಿ ವಹಿಸಿ ಮಂಜೂರು ಮಾಡಿಸಿದ ಹೊಸ ಯೋಜನೆಗಳು ಯಾವುವು, ಅದಕ್ಕೆ ಎಷ್ಟು ಹಣ ಬಿಡುಗಡೆಯಾಗಿದೆ ಎಂಬ ವಿವರವನ್ನು ನೀಡಲಿ. ಈ ಮೂರು ವರ್ಷದಲ್ಲಿ ಯಾವೊಂದು ಅಭಿವೃದ್ಧಿ ಕೆಲಸಗಳೂ ನಡೆದಿಲ್ಲ. ನನ್ನ ಅವಧಿಯಲ್ಲಿ ಮಂಜೂರಾದ ಯೋಜನೆಗಳನ್ನು ಪೂರ್ಣಗೊಳಿಸಿ ಉದ್ಘಾಟನೆ ಮಾಡುವ ಕೆಲಸವನ್ನಷ್ಟೇ ಅವರು ಮಾಡುತ್ತಿದ್ದಾರೆ’’ ಎಂದು ಟೀಕಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಿಗೆ ಶೇ10ರಷ್ಟು ಕಮಿಷನ್‌ ಬರುತ್ತದೆ. ₹1300 ಕೋಟಿ ಅನುದಾನಕ್ಕೆ ₹130 ಕೋಟಿ ಕಮಿಷನ್‌ ಪಡೆಯಬಹುದಿತ್ತು. ಆದರೆ ನಾನು ಕಮಿಷನ್‌ ಪಡೆಯುವುದಿಲ್ಲ ಎಂದು ಪ್ರಮೋದ್‌ ಹೇಳಿದ್ದಾರೆ. ಇವರು ಪಡೆಯುವುದಿಲ್ಲ ಎಂದರೆ ಅವರ ಪಕ್ಷದ ಎಲ್ಲ ಶಾಸಕರು ಕಮಿಷನ್‌ ಪಡೆಯುತ್ತಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ವ್ಯಂಗ್ಯವಾಡಿದರು.

ಕೊಳಲಗಿರಿಗೆ ಮಂಜೂರಾಗಿದ್ದ ಮಂಗಳೂರು ವಿಶ್ವವಿದ್ಯಾಲಯದ ಕೇಂದ್ರವನ್ನು ವಿನಯ ಕುಮಾರ್‌ ಸೊರಕೆ ಅವರು ಕಾಪು ಕ್ಷೇತ್ರಕ್ಕೆ ವರ್ಗಾಯಿಸಿದ್ದಾರೆ. ಬ್ರಹ್ಮಾವರವನ್ನು ಪುರಸಭೆ ಮಾಡಬೇಕು ಎಂಬ ಬೇಡಿಕೆ ಇದೆ. ಅಲ್ಲದೆ ಜಿಲ್ಲೆಯ ಬೇರೆಲ್ಲ ಊರುಗಳಿಗಿಂತ ಬ್ರಹ್ಮಾವರಕ್ಕೆ ಆ ಅರ್ಹತೆ ಇದೆ. ಆದರೆ ಬ್ರಹ್ಮಾವರವನ್ನು ಪುರಸಭೆಯನ್ನಾಗಿ ಮಾಡದೆ ಕಾಪುವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದರಿಂದಾಗಿ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಅನ್ಯಾಯವಾಗಿದೆ. ಇಷ್ಟೆಲ್ಲ ಆದರೂ ಶಾಸಕರು ಮೌನವಾಗಿದ್ದಾರೆ ಎಂದರು.

ಗ್ರಾಮೀಣ ಭಾಗಕ್ಕೆ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾತಿ ನೀಡಲಾಗಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ಬಂದ ನಂತರ ಈ ಯೋಜನೆ ಪೂರ್ಣಗೊಳಿಸಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.