ADVERTISEMENT

ಶೆಟ್ಟಿ ಹೆಸರು ಇಡದಿದ್ದರೆ ಪ್ರತಿಭಟನೆ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 9:43 IST
Last Updated 8 ಜುಲೈ 2017, 9:43 IST

ಉಡುಪಿ: ‘ಮಂಗಳೂರು ಮಹಾನಗರ ಪಾಲಿಕೆ ತಾನೇ ನಿರ್ಧಾರ ತೆಗದುಕೊಂಡಂತೆ ಎಚ್‌ಎಚ್‌ ಲೈಟ್‌ ಹೌಸ್‌ ಹಿಲ್ ರೋಡ್‌ ರಸ್ತೆಗೆ ಮೂಲ್ಕಿ ಸುಂದರ್‌ರಾಮ್ ಶೆಟ್ಟಿ ಅವರ ಹೆಸರನ್ನು ಇಡಬೇಕು. ಇಲ್ಲದಿದ್ದರೆ ಹಂತ ಹಂತವಾಗಿ ಹೋರಾಟ ನಡೆಸಬೇಬೇಕಾಗುತ್ತದೆ’ ಎಂದು ವಿಶ್ವ ಬಂಟರ ಯಾನೆ ನಾಡವರ ಜನ ಜಾಗೃತಿ ಬಳಗದ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಭಾಸ್ಕರ ರೈ ಎಚ್ಚರಿಕೆ ನೀಡಿದರು.

‘ಜುಲೈ 2ರಂದು ರಸ್ತೆಯ ಮರು ನಾಮಕರಣ ಕಾರ್ಯಕ್ರಮ ನಡೆಯಬೇಕಾಗಿತ್ತು. ಆದರೆ, ತಪ್ಪು ಮಾಹಿತಿ ನೀಡಿ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ಮುಗ್ಧ ವಿದ್ಯಾರ್ಥಿಗಳನ್ನು ಎತ್ತಿ ಕಟ್ಟಲಾಯಿತು. ಗೊಂದಲ ಸೃಷ್ಟಿಯಾದ ನಂತರ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

ಜಾತ್ಯತೀತ ನಿಲುವಿನ, ಮಾನವೀಯ ಮೌಲ್ಯಗಳೊಂದಿಗೆ ಬದುಕಿದ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ ವ್ಯಕ್ತಿಗೆ ಮಾಡುತ್ತಿರುವ ಅನ್ಯಾಯವಾಗಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ADVERTISEMENT

ಬೆಳ್ವೆ ವಸಂತ್ ಕುಮಾರ್ ಶೆಟ್ಟಿ ಮಾತನಾಡಿ, ‘ ಒಟ್ಟು 110 ಬಂಟರ ಸಂಘಟನೆಗಳಿದ್ದು ಯಾವೊಂದು ಸಂಘಟನೆಯೂ ರಸ್ತೆಗೆ ಮೂಲ್ಕಿ ಸುಂದರ್‌ರಾಮ್ ಶೆಟ್ಟಿ ಅವರ ಹೆಸರಿಡಿ ಎಂದು ಮನವಿ ಮಾಡಿರಲಿಲ್ಲ. ಪಾಲಿಕೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿತ್ತು.

ಈಗ ಅದನ್ನು ರದ್ದು ಮಾಡುವ ಮೂಲಕ ಎರಡು ಸಮುದಾಯದ ಮಧ್ಯೆ ಗೊಂದಲ ಸೃಷ್ಟಿಸಿ ಮನಸ್ಸು ಒಡೆಯುವ ಕೆಲಸ ಮಾಡಲಾಗುತ್ತಿದೆ. ಶಾಸಕ ಜೆ.ಆರ್. ಲೋಬೊ ಹಾಗೂ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಅವರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಶನಿವಾರ ಬೆಳಿಗ್ಗೆ ಈ ಬಗ್ಗೆ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಈ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂದು ಸಂಜೆ ಸಭೆ ಕರೆದಿದ್ದಾರೆ ಎಂದು ಗೊತ್ತಾಗಿದೆ. ಸಭೆಯಲ್ಲಿ ರಸ್ತೆಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ ಪ್ರತಿಭಟನೆ ಮಾಡಲಾಗುವುದು’ ಎಂದರು. ಬಳಗದ ಸಂಚಾಲಕ ಎಂ. ಚಂದ್ರಶೇಖರ ಹೆಗ್ಡೆ, ಆರೂರು ತಿಮ್ಮಪ್ಪ ಶೆಟ್ಟಿ, ಕೃಷ್ಣರಾಜ್ ಶೆಟ್ಟಿ ಚೋರಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.