ADVERTISEMENT

‘ಶೈಕ್ಷಣಿಕ ಸ್ಥಾನ ಹೀಗೇ ಕಾಪಾಡಿಕೊಳ್ಳೋಣ’

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 5:32 IST
Last Updated 14 ಜುಲೈ 2017, 5:32 IST

ಬೈಂದೂರು: ಉಡುಪಿ ಜಿಲ್ಲೆಯ ಶಿಕ್ಷಣ ಇಲಾಖೆ, ಶಿಕ್ಷಕ ಸಮೂಹ ಮತ್ತು ಪೋಷಕರ ಸಹಯೋಗದ ಫಲವಾಗಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಗಳಿಸಲು ಸಾಧ್ಯವಾಗಿದೆ. ಈ ಸ್ಥಾನವನ್ನು ಸದಾ ನಮ್ಮದಾಗಿಸಿಕೊಳ್ಳಲು ಎಲ್ಲರೂ ಸೇರಿ ಶ್ರಮ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಖಂಬದಕೋಣೆ ಪ್ರೌಢಶಾಲೆಯಲ್ಲಿ ₹44. 44 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಹೆಚ್ಚಿನ ತರಗತಿ ಕೊಠಡಿ ಮತ್ತು ಶೌಚಾಲಯ ಕಾಮಗಾರಿಗೆ ಗುರುವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಕ್ಷೇತ್ರದ ಎರಡೂ ಹಂತಗಳ ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಸಮಿತಿ ಅಧ್ಯಕ್ಷನ ನೆಲೆಯಲ್ಲಿ ಸರಣಿ ಪೋಷಕರ ಸಭೆ ನಡೆಸಿ ಮಕ್ಕಳ ಶೈಕ್ಷಣಿಕ ಔನ್ನತ್ಯ ಸಾಧನೆಯಲ್ಲಿ ಪೋಷಕರ ಹೊಣೆಗಾರಿಕೆ ಬಗ್ಗೆ ಅರಿವು ಮೂಡಿಸಲಾಗುವುದು. ಅದರೊಂದಿಗೆ ಸಂಸ್ಥೆಗಳು ಮತ್ತು ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸ್. ಪ್ರಕಾಶ್‌ಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ, ತಾಲ್ಲೂಕು ಪಂಚಾಯಿತಿ ಸದಸ್ಯ ಜಗದೀಶ ದೇವಾಡಿಗ, ಕೆರ್ಗಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋಮು.

ಉಪಾಧ್ಯಕ್ಷ ಸುಂದರ ಕೊಠಾರಿ, ಖಂಬದಕೋಣೆ ಅಧ್ಯಕ್ಷ ರಾಜೇಶ ದೇವಾಡಿಗ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಜಯಲಕ್ಷ್ಮೀ ಕಾರಂತ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಉಮೇಶ ಎನ್. ರಾಯ್ಕರ್, ಉಪನ್ಯಾಸಕರು, ಶಿಕ್ಷಕರು, ಗುತ್ತಿಗೆದಾರ ಕೃಷ್ಣ ದೇವಾಡಿಗ, ಗೋಕುಲ ಶೆಟ್ಟಿ ಸೇರಿದಂತೆ  ಇತರರು ಇದ್ದರು.
ಶಿಕ್ಷಕ ವಿಶ್ವನಾಥ ಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.