ADVERTISEMENT

ಸಂವಿಧಾನಕ್ಕೆ ಬದ್ಧವಾಗಿ ನಡೆಯುವ ಸಂಕಲ್ಪ ಅಗತ್ಯ: ಸುನೀಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 27 ಜನವರಿ 2017, 9:16 IST
Last Updated 27 ಜನವರಿ 2017, 9:16 IST

ಕಾರ್ಕಳ: ಪ್ರಜಾಪ್ರಭುತ್ವ ಯಶಸ್ವಿಯಾಗಿ ಮುನ್ನಡೆಯಲು ದೇಶದ ಸಂವಿಧಾನಕ್ಕೆ ಬದ್ಧರಾಗಿ ನಾವೆಲ್ಲರೂ ನಡೆಯುವ ಸಂಕಲ್ಪವನ್ನು ನಾವು ಕೈಗೊಂಡು ಅದನ್ನು ಪಾಲಿಸಬೇಕು ಎಂದು  ಶಾಸಕ ವಿ.ಸುನೀಲ್ ಕುಮಾರ್ ತಿಳಿಸಿದರು.

ಗಣರಾಜ್ಯೋತ್ಸವದ ಪ್ರಯುಕ್ತ ನಗರದ ಮಂಜುನಾಥ ಪೈ ಸಾಂಸ್ಕತಿಕ ಸಭಾಭವನದಲ್ಲಿ ಗುರುವಾರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  68ವರ್ಷ ಗಳಿಂದ ನಮ್ಮ ರಾಷ್ಟ್ರವನ್ನು ಪ್ರಜಾ ಪ್ರಭುತ್ವರಾಷ್ಟ್ರ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಮುನ್ನಡೆಯುತ್ತಾ ಬಂದಿದ್ದೇವೆ. ಜಗತ್ತಿನಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ನಮ್ಮ ರಾಷ್ಟ್ರದ ಸಾರ್ವಭೌಮತ್ವದ ಚೌಕಟ್ಟಿನಲ್ಲಿ ನಮ್ಮ ಎಲ್ಲ ಕಾರ್ಯಚಟುವಟಿಕೆಗಳನ್ನು ಗಟ್ಟಿಗೊಳಿಸುತ್ತಾ ನಡೆಯುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ ಮಾತನಾಡಿ, ಭಾರತದ ಧ್ಯೇಯವಾಕ್ಯ ‘ಸತ್ಯಮೇವ ಜಯತೇ’ ಎನ್ನುವುದನ್ನು ಅನುಸರಿಸಿ ನಾವು ನಡೆಯಬೇಕಾಗಿದೆ. ಭ್ರಷ್ಟಾಚಾರ ಮುಕ್ತ ಭಾರತವನ್ನು ಮುನ್ನಡೆಸಲು ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳು ಮುಂದಿನ ದಿನಗಳಲ್ಲಿ ನಗದು ರಹಿತ ಪಂಚಾಯಿತಿಗಳಾಬೇಕು. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಉದಯ ಎಸ್.ಕೋಟ್ಯಾನ್, ಪುರಸಭಾ ಉಪಾಧ್ಯಕ್ಷ ಗಿರಿಧರ ನಾಯಕ್ ಮಾತನಾಡಿದರು. ರಾಷ್ಟ್ರಮಟ್ಟದಲ್ಲಿ ಶಟ್ಲ್ ಬ್ಯಾಡ್ಮಿಂಟ ನ್‌ನಲ್ಲಿ ಮೊದಲ ಸ್ಥಾನ ಪಡೆದ ಹಿರಿ ಯಂಗಡಿ ಎಸ್.ಎನ್.ವಿ ಪ್ರೌಢಶಾಲೆಯ ಶಶಾಂಕ್ ಜಿ, ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಮೋಹಿತ್, ಶ್ರೀಕಾಂತ ಶೆಣೈ, ಶ್ರೇಯಾ, ಅಖಿಲಾ, ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ತೋರಿದ ನಿಟ್ಟೆ ಸಂಸ್ಥೆಯ ದಿನೇಶ್, ಯೋಗದಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಪ್ರತ್ಯಕ್ಷ ಕುಮಾರ್,

ಈಜಿನಲ್ಲಿ ರಾಜ್ಯಮಟ್ಟದಲ್ಲಿ ಬಹುಮಾನಿತೆ ಭುವನೇಂದ್ರ ಪದವಿ ಪೂರ್ವ ಕಾಲೇಜಿನ ಅಮೃತಾ ಕೆ, ಜಂಪ್ ರೋಪ್‌ನಲ್ಲಿ ರಾಜ್ಯಮಟ್ಟದಲ್ಲಿ ಬಹುಮಾ ನಿತರಾದ ಎಸ್.ವಿ.ಟಿ ಪದವಿಪೂರ್ವ ಕಾಲೇಜಿನ ತಂಡ, ಪ್ರಬಂಧ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಪ್ರಥಮ ಸ್ಥಾನ ಬಹು ಮಾನಿತರಾದ ಭುವನೇಂದ್ರ ಪ್ರಥಮ ದರ್ಜೆ ಕಾಲೇಜಿನ ಶ್ರುತಿ ಹಾಗೂ ಅತ್ತೂ ರಿನ ಅನುಷಾ, ವಾಲಿಬಾಲ್‌ನಲ್ಲಿ ವಿಜೇತ ರಾದ ದೀಕ್ಷಿತಾ ಶೆಟ್ಟಿ  ಹಾಗೂ ಮನೋ ಹರ ಅವರನ್ನು  ಪುರಸ್ಕರಿಸಲಾಯಿತು.

ನಗರದ ಅನಂತ ಶಯನ ವೃತ್ತದಲ್ಲಿ ಪುರಸಭಾಧ್ಯಕ್ಷೆ ಅನಿತಾ ಆರ್.ಅಂಚನ್ ಧ್ವಜಾರೋಹಣ ನಡೆಸಿದರು. ನಂತರ ಅನಂತಶಯನ ವೃತ್ತದಿಂದ ಗಾಂಧಿ ಮೈದಾನದ ತನಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಗಾಂಧಿ ಮೈದಾನದಲ್ಲಿ ಗಣರಾಜ್ಯೋತ್ಸವ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಗುರುಪ್ರಸಾದ್ ಧ್ವಜಾರೋಹಣ ನಡೆಸಿದರು. 

ಪಥ ಸಂಚಲನದಲ್ಲಿ ಕಾಲೇಜು ವಿಭಾಗದಲ್ಲಿ ಭುವನೇಂದ್ರ ಕಾಲೇಜಿನ ಎನ್.ಸಿ.ಸಿ ಆರ್ಮಿ ವಿಭಾಗ ಬಹುಮಾನ, ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ವಿಭಾಗಗಳಲ್ಲಿ ಪೆರ್ವಾಜೆ ಸುಂದರ ಪುರಾಣಿಕ ಶಾಲೆ ಹಾಗೂ ಪ್ರಾಥಮಿಕ ಶಾಲೆ ಬಹುಮಾನ ಪಡೆದವು.

ಪುರಸಭಾ ಉಪಾಧ್ಯಕ್ಷ ಗೋಪಾಲ ಮೂಲ್ಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಕೇಶವ ಶೆಟ್ಟಿಗಾರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ರೇಷ್ಮಾಉದಯ ಕುಮಾರ್ ಶೆಟ್ಟಿ, ಸುಮಿತ್ ಶೆಟ್ಟಿ, ಪುರಸಭಾ ಮುಖ್ಯಾ ಧಿಕಾರಿ ಮೇಬಲ್ ಡಿಸೋಜ, ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು. ತಹಶೀಲ್ದಾರ್ ಗುರುಪ್ರಸಾದ್ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮನಮೋಹನ್ ವಂದಿಸಿದರು. ಗಣಪಯ್ಯ ನಿರೂಪಿಸಿದರು.

*
ಕಾರ್ಕಳ ತಾಲ್ಲೂಕು ಈ ಬಾರಿ ನೂರು ವರ್ಷಗಳನ್ನು ಪೂರೈಸುತ್ತಿರುವ ಪ್ರಯುಕ್ತ ನೂರರ ಸಂಭ್ರಮವನ್ನು ವರ್ಷದುದ್ದಕ್ಕೂ ಕೈಗೊಳ್ಳಲಾಗುವುದು. ಎಲ್ಲರ ಭಾಗವಹಿಸುವಿಕೆ ಅವಶ್ಯವಾಗಿದೆ.
-ಸುನೀಲ್‌ ಕುಮಾರ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT