ADVERTISEMENT

ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ಅಗತ್ಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 5:36 IST
Last Updated 2 ಡಿಸೆಂಬರ್ 2017, 5:36 IST

ಉಡುಪಿ:‘ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕತೆಯ ಬೆಳವಣಿಗೆಗೆ ಸಣ್ಣ ಕೈಗಾರಿಕೆಗಳು ತಮ್ಮದೇ ಆದ ಮಹತ್ವದ ಕೊಡುಗೆ ನೀಡುತ್ತವೆ. ಇಂತಹ ಕೈಗಾರಿಕೆಗಳಿಗೆ ಸರ್ಕಾರ ಉತ್ತೇಜನ ನೀಡಬೇಕು’ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ ನಗರದ ಬೀಡಿನಗುಡ್ಡೆಯ ಮಹಾತ್ಮ ಗಾಂಧಿ ಬಯಲು ರಂಗ ಮಂದಿರ ಮೈದಾನದಲ್ಲಿ ಏರ್ಪಡಿಸಿರುವ ‘ಎಕ್ಸ್‌ಪೋ 2017’ ಕೈಗಾರಿಕಾ ವಸ್ತುಪ್ರದರ್ಶನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಸಣ್ಣ ಕೈಗಾರಿಕೆಗಳಿಗೆ ಸರ್ಕಾರಗಳು ಉತ್ತೇಜನ ನೀಡುತ್ತಿಲ್ಲ. ಎಷ್ಟು ಸಣ್ಣ ಕೈಗಾರಿಕೆ ಆರಂಭಿಸಲಾಗಿದೆ ಎಂದು ಸದನದಲ್ಲಿ ಕೇಳಿದ ಪ್ರಶ್ನೆಗೆ ನೀಡಿದ ಉತ್ತರ ಆಶ್ಚರ್ಯಕರವಾಗಿತ್ತು. ಒಂದು ಲಕ್ಷ ಸಣ್ಣ ಕೈಗಾರಿಕೆಗಳಿಗೆ ಪರವಾನಗಿ ನೀಡುವ ಉದ್ದೇಶ ಇದೆ. ಆದರೆ ಶೇ7ರಷ್ಟು ಮಾತ್ರ ನೀಡಲಾಗಿದೆ ಎಂಬ ಮಾಹಿತಿ ನೀಡಿದರು.

ADVERTISEMENT

ಕೈಗಾರಿಕೆ ಆರಂಭಿಸಲು ಜಮೀನಿಗಾಗಿ ಹಣ ಪಾವತಿ ಮಾಡಿದರೆ ಕೇವಲ ಒಂದು ಪ್ರಮಾಣ ಪತ್ರ ನೀಡುತ್ತಾರೆ. ಆ ನಂತರದ ಪ್ರಕ್ರಿಯೆ ನಡೆಯುವುದೇ ಇಲ್ಲ. ಸಣ್ಣ ಕೈಗಾರಿಕೆಗಳ ಮಹತ್ವವನ್ನು ಅರಿತು ಪ್ರೋತ್ಸಾಹ ನೀಡಬೇಕು. ಚೀನಾದಿಂದ ಬರುತ್ತಿರುವ ವಸ್ತುಗಳ ವಾರ್ಷಿಕ ವಹಿವಾಟಿನ ಮೌಲ್ಯ ಅಂದಾಜು 10 ಲಕ್ಷ ಕೋಟಿಯಾಗಿದೆ. ಚೀನಾ ವಸ್ತುಗಳಿಗೆ ಪೈಪೋಟಿ ನೀಡುವ ಸಾಮರ್ಥ್ಯ ಇರುವುದು ನಮ್ಮ ಸಣ್ಣ ಕೈಗಾರಿಕೆಗಳಿಗೆ ಎಂದು ಅವರು ಹೇಳಿದರು.

ಉಡುಪಿಯಲ್ಲಿ ಸಣ್ಣ ಕೈಗಾರಿಕೆಗಳಿಗೆ ಮೂಲ ಸೌಕರ್ಯ ಒದಗಿಸಿಕೊಡುವ ಕೆಲಸ ಮಾಡಬೇಕು. ಜಿಲ್ಲೆ ಪ್ರಗತಿ ಯತ್ತ ಸಾಗಲು ಇದರಿಂದ ಅನುಕೂ ಲವಾಗಲಿದೆ ಎಂದರು. ಅದಾನಿ ಯುಪಿಸಿಎಲ್‌ ಕಾರ್ಯನಿ ರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿ, ಅದಾನಿ ಸಂಸ್ಥೆ ಸಣ್ಣ ಕೈಗಾರಿಕೆಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಜಿಲ್ಲಾ ಕೈಗಾರಿಕಾ ಸಂಘ 25 ವರ್ಷಗಳಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಸಂಘದ ಅಧ್ಯಕ್ಷ ಸುಧೀರ್ ನಾಯಕ್, ಕಾರ್ಯದರ್ಶಿ ವಸಂತ್ ಕಿಣಿ, ಖಜಾಂಚಿ ಹೃಷಿಕೇಶ್ ಹೆಗ್ಡೆ, ವಸ್ತುಪ್ರದರ್ಶನ ಸಮಿತಿ ಮುಖ್ಯಸ್ಥ ಶಂಕರ್ ಸುವರ್ಣ, ಸಹ ಮುಖ್ಯಸ್ಥ ಜಗದೀಶ್ ರಾವ್ ಇದ್ದರು.

* * 

ಮೂರು ದಿನಗಳ ಕಾಲ ವಸ್ತು ಪ್ರದರ್ಶನ ನಡೆಯಲಿದ್ದು, ಕೈಗಾರಿಕಾ, ಕರಕುಶಲ ಸೇರಿದಂತೆ 102 ಮಳಿಗೆಗಳಿವೆ.
ಸುಧೀರ್ ನಾಯಕ್,
ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.