ADVERTISEMENT

ಸಮಾಜದ ಒಳಿತಿಗೆ ಅಂಬೇಡ್ಕರ್‌ ತತ್ವ ಅಗತ್ಯ

ಸಾಮಾಜಿಕ ಕಾರ್ಯಕರ್ತ ಶಿವಸುಂದರ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 5:39 IST
Last Updated 20 ಮಾರ್ಚ್ 2017, 5:39 IST
‘ಅಂಬೇಡ್ಕರ್‌ ಜ್ಞಾನದರ್ಶನ ಅಭಿಯಾನ’ದ ಅಂಗವಾಗಿ ಆದಿಉಡುಪಿಯ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಎರಡು ದಿನಗಳ ವಿಭಾಗಮಟ್ಟದ ಕಾರ್ಯಾಗಾರದಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಸುಂದರ್‌ ಮಾತನಾಡಿದರು.
‘ಅಂಬೇಡ್ಕರ್‌ ಜ್ಞಾನದರ್ಶನ ಅಭಿಯಾನ’ದ ಅಂಗವಾಗಿ ಆದಿಉಡುಪಿಯ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಎರಡು ದಿನಗಳ ವಿಭಾಗಮಟ್ಟದ ಕಾರ್ಯಾಗಾರದಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಸುಂದರ್‌ ಮಾತನಾಡಿದರು.   

ಉಡುಪಿ: ಪ್ರಸ್ತುತ ಸಮಾಜದ ಸಕಲ ಬಿಕ್ಕಟ್ಟುಗಳಿಗೆ ಡಾ. ಬಿ.ಆರ್‌. ಅಂಬೇ ಡ್ಕರ್‌ ಅವರ ಪ್ರಭುತ್ವ ಭಾರತ ಹಾಗೂ ಪ್ರಭುತ್ವ ಸಮಾಜವಾದದ ಪರಿಕಲ್ಪನೆಯೇ ಪರಿಹಾರ ಎಂದು ಸಾಮಾಜಿಕ ಕಾರ್ಯ ಕರ್ತ ಶಿವಸುಂದರ್‌ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಹಾಗೂ ಸಮ್ಮೇಳನ ಆಯೋಜನಾ ಸಮಿತಿಯ ಸಹಯೋಗದಲ್ಲಿ ಡಾ. ಬಿ.ಆರ್‌. ಅಂಬೇ ಡ್ಕರ್‌ ಅವರ 125ನೇ ಜಯಂತಿಯ ವರ್ಷಾಚರಣೆ ಹಾಗೂ ‘ಅಂಬೇಡ್ಕರ್‌ ಜ್ಞಾನದರ್ಶನ ಅಭಿಯಾನ’ದ ಅಂಗವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾಮಾಜಿಕ ಕಾರ್ಯ ಕರ್ತರಿಗೆ ಆದಿಉಡುಪಿಯ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಎರಡು ದಿನಗಳ ವಿಭಾಗಮಟ್ಟದ ಕಾರ್ಯಾಗಾರದಲ್ಲಿ ‘ರೈತ ಮತ್ತು ಕಾರ್ಮಿ ಕ ಚಳುವಳಿ’ ಕುರಿತು ಮಾತನಾಡಿದರು.

ಸಾಮಾಜಿಕ ಮತ್ತು ಆರ್ಥಿಕ ಸಮಾ ನತೆಯನ್ನು ಸಾಧಿಸದಿದ್ದರೆ, ರಾಜಕೀಯ ಸ್ವಾತಂತ್ರ್ಯಕ್ಕೆ ಯಾವುದೇ ಅರ್ಥ ಇರುವುದಿಲ್ಲ. ಸಮಾನತೆಯನ್ನು ಮೂಲ ಭೂತ ಹಕ್ಕನ್ನಾಗಿ ಮಾರ್ಪಡಿಸಬೇಕು. ಆಗ ಎಲ್ಲರಿಗೂ ಸಮಾನತೆ ಮತ್ತು ಸ್ವಾತಂತ್ರ್ಯದ ಹಕ್ಕು ಸಿಗುತ್ತದೆ ಎಂದರು.

ಭೂಮಿ ಪ್ರಶ್ನೆ ಎನ್ನುವುದು ಕೇವಲ ಆರ್ಥಿಕ ಪ್ರಶ್ನೆಯಲ್ಲ. ಈ ದೇಶದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಪ್ರಶ್ನೆಯೂ ಆಗಿದೆ ಎಂದು ಅಂಬೇಡ್ಕರ್‌ ತಿಳಿಸಿದ್ದರು. ಅಲ್ಲದೆ, ಭೂಮಿ ಹಂಚಿಕೆ ಯಿಂದ ಸಮಾನತೆ ತರಲು ಸಾಧ್ಯವಿಲ್ಲ. ಹಾಗಾಗಿ ಭೂಮಿಯ ರಾಷ್ಟ್ರೀಕರಣ ಆಗಬೇಕು. ಆ ಮೂಲಕ ಹಳ್ಳಿಯ ಪ್ರತಿ ಕುಟುಂಬಕ್ಕೆ ಭೂಮಿಯನ್ನು ಹಂಚಿಕೆ ಮಾಡಿ ಸಾಮೂಹಿಕ ಕೃಷಿಗೆ ಒತ್ತು ನೀಡಬೇಕೆಂದು ಅವರು ಪ್ರತಿಪಾದಿಸಿದ್ದರು ಎಂದು ಅವರು ಹೇಳಿದರು.

ಈ ದೇಶದ ಕೈಗಾರಿಕೆಯ ಸ್ವರೂಪ, ಅಭಿವೃದ್ಧಿಯ ಮಾದರಿ ಈ ಮೊದಲಾದ ಕಾರಣಗಳಿಂದಾಗಿ ಕೃಷಿ ಹಾಗೂ ಸಣ್ಣ ಕೈಗಾರಿಕೆಯ ಕಾರ್ಮಿಕರು ಬಿಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ರಾಜ್ಯದಲ್ಲಿ 2015ರ ವರ್ಷದಿಂದೇಚೆಗೆ 1,410ಕ್ಕೂ ಹೆಚ್ಚಿನ ಸಂಖ್ಯೆಯ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಮೊದಲ ಬಾರಿಗೆ 14 ಮಂದಿ ದಲಿತ ರೈತರು ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ಕರಾವಳಿ ಕರ್ನಾಟಕ ಭಾಗದಲ್ಲಿ ರೈತಾಪಿ ವರ್ಗ, ಶೋಷಿತರು, ದಲಿತರು ಎಡ ಪಕ್ಷಗಳ ಜೀವಾಳವಾಗಿದ್ದರು. ಆದರೆ, ಪ್ರಸ್ತುತ ಬಲಪಂಕ್ತಿಯ ಬೆನ್ನೆಲು ಬಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ಪತ್ರಕರ್ತ ಪಿ.ಬಿ. ಸುರೇಶ್‌ ಇದ್ದರು.

*
ರಾಜಕೀಯ ಸ್ವಾತಂತ್ರ್ಯವನ್ನು ಈ ದೇಶದ ಸಮಸ್ತ ನಾಗರಿಕರೂ ಅನುಭವಿಸಬೇಕಾದರೆ, ಅವರಿಗೆ ಆರ್ಥಿಕ ಮತ್ತು ಸಾಮಾಜಿಕ ಪ್ರಜಾತಂತ್ರವು ದಕ್ಕಬೇಕು.
-ಶಿವಸುಂದರ್‌,
ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT