ADVERTISEMENT

ಸರ್ಕಾರಿ ಬಸ್‌ಗಳಿಗೆ ಖಾಸಗಿಯವರಿಂದ ತೊಂದರೆ : ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:47 IST
Last Updated 22 ಮೇ 2017, 5:47 IST

ಗಂಗೊಳ್ಳಿ(ಬೈಂದೂರು): ‘ಗಂಗೊಳ್ಳಿ- ಕುಂದಾಪುರ ನಡುವೆ ಸಂಚರಿಸುವ ಸರ್ಕಾರಿ ಬಸ್‌ಗಳಿಗೆ ಕೆಲವು ಖಾಸಗಿ ಬಸ್‌ಗಳ ಸಿಬ್ಬಂದಿ ನಿರಂತರ ತೊಂದರೆ ಕೊಡುತ್ತಿದ್ದು, ಈ ಧೋರಣೆ ಮುಂದುವರಿದರೆ ಅದರ ವಿರುದ್ಧ ಗಂಗೊಳ್ಳಿ ನಾಗರಿಕರು ಹೋರಾಟ ನಡೆಸುವರು’ ಎಂದು ನಾಗರಿಕ ಹೋರಾಟ ಸಮಿತಿ ಪ್ರಕಟಣೆಯಲ್ಲಿ  ತಿಳಿಸಿದೆ.

‘ಎಂಟು ವರ್ಷಗಳಿಂದ ರಾಜ್ಯ ಸಾರಿಗೆ ಸಂಸ್ಥೆ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ನಾಗರಿಕರಿಗೆ ಉತ್ತಮ ಸೇವೆ ನೀಡುತ್ತಿದೆ. ಆದರೆ, ಖಾಸಗಿ ಬಸ್‌ಗಳು ನಿಯಮ ಉಲ್ಲಂಘಿಸಿ ಅನಾರೋಗ್ಯಕರ ಪೈಪೋಟಿ ನಡೆಸುವ ಮೂಲಕ ಸಂಸ್ಥೆಗೆ ಉಪಟಳ ನೀಡುತ್ತಿವೆ.

ಅವು ಉತ್ತಮ ಆದಾಯ ಬರುವ ಸಮಯದಲ್ಲಿ ಮಾತ್ರ ಓಡಾಟ ನಡೆಸುತ್ತಿದ್ದು, ಜನರ ಅಗತ್ಯಕ್ಕೆ ಸ್ಪಂದಿಸುತ್ತಿಲ್ಲ. ಸರ್ಕಾರಿ ಬಸ್‌ಗಳ ಸಂಚಾರದ ಅವಧಿಯಲ್ಲಿ ಖಾಸಗಿ ಬಸ್ಸುಗಳು ಸಂಚಾರ ನಡೆಸುವ ಮೂಲಕ ಅವುಗಳ ನ್ಯಾಯವಾದ ಆದಾಯಕ್ಕೆ ಕತ್ತರಿ ಹಾಕುತ್ತವೆ.

ಬೇರೆ ಸಮಯದಲ್ಲಿ ಹಾಗೂ ಭಾನುವಾರ ಮತ್ತು ರಜಾ ದಿನಗಳಲ್ಲಿ ಅರ್ಧದಷ್ಟು ಖಾಸಗಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸುತ್ತಿವೆ. ಕುಂದಾಪುರ, ಬೈಂದೂರು ಕಡೆಗಳಿಗೆ ತೆರಳಬೇಕಾದ ಖಾಸಗಿ ಬಸ್‌ಗಳು ಸಂಜೆಯ ಬಳಿಕ ತ್ರಾಸಿ ತನಕ ಸಂಚರಿಸುತ್ತವೆ.

ಕೆಲವು ತಮ್ಮ ಸಂಚಾರವನ್ನೇ ಸ್ಥಗಿತಗೊಳಿಸುತ್ತಿವೆ. ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ, ಉಪಟಳದ ಬಗ್ಗೆ ಈಗಾಗಲೇ ಅನೇಕ ದೂರುಗಳು ಕೇಳಿ ಬಂದಿದ್ದು, ಗ್ರಾಮ ಸಭೆಗಳಲ್ಲೂ ಪ್ರತಿಧ್ವನಿಸಿವೆ.

ಈ ವಿಚಾರಗಳನ್ನು ಅನೇಕ ಬಾರಿ ಖಾಸಗಿ ಬಸ್‌ ಮಾಲೀಕರ ಗಮನಕ್ಕೆ ತಂದಿದ್ದರೂ ಅವರಿಂದ ಸ್ಪಂದನೆ ದೊರೆತಿಲ್ಲ. ಇಂತಹ ಬಸ್‌ಗಳ ವಿರುದ್ಧ ಸಾರಿಗೆ ಪ್ರಾಧಿಕಾರ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ’ ಎಂದು ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.