ADVERTISEMENT

ಸೈನಿಕರ ಸ್ಮರಣೆ ನಿರಂತರವಾಗಿರಲಿ: ರಾಜೇಶ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 8:41 IST
Last Updated 29 ಜನವರಿ 2015, 8:41 IST

ಪ್ರಜಾವಾಣಿ ವಾರ್ತೆ
ಬೈಂದೂರು: ‘ಅತ್ಯಂತ ಅಪಾಯಕಾರಿ ಮತ್ತು ಕ್ಲಿಷ್ಟ ಸನ್ನಿವೇಶಗಳನ್ನು ಎದುರಿಸಿ, ಜೀವದ ಹಂಗು ತೊರೆದು ದೇಶವನ್ನು ರಕ್ಷಿಸುವ, ಆ ಮೂಲಕ ದೇಶವಾಸಿಗಳಿಗೆ ಶಾಂತಿ, ಭದ್ರತೆಯ ಬದುಕು ಖಾತರಿಪಡಿಸುವ ಸೈನಿಕರ ಸ್ಮರಣೆ ನಿರಂತರ ನಡೆಯಬೇಕು’ ಎಂದು ರಾಜೇಶ ಎಂ. ಹೇಳಿದರು.

ತೊಂಡೆಮಕ್ಕಿಯ ಜೈ ಜವಾನ್ ವೀರಯೋಧರ ಸ್ಮರಣಾ ಸಮಿತಿಯ ಆಶ್ರಯದಲ್ಲಿ ಗಣರಾಜ್ಯೋತ್ಸವ ದಿನವಾದ ಸೋಮವಾರ ನಡೆದ ಯೋಧರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶದ ಜನರಿಗೆ ಕ್ರೀಡಾಳುಗಳು ಮತ್ತು ಚಿತ್ರ ನಟರು ಮಾತ್ರ ಮಾದರಿಗಳಾಗಿರುವುದು ದೊಡ್ಡ ದುರಂತ. ಅದರ ಬದಲಿಗೆ ದೇಶಕ್ಕಾಗಿ ತಮ್ಮ ಸುಖ ಮತ್ತು ಪ್ರಾಣ ಅರ್ಪಿಸಲು ಸಿದ್ಧರಾಗಿರುವ ಯೋಧರು ಅವರ ಕಣ್ಮಣಿಗಳಾಗಬೇಕು. ನಮ್ಮ ನಡುವಿರುವ ಅವರನ್ನು ಗುರುತಿಸುವ, ಗೌರವಿಸುವ ಕೆಲಸ ಹೆಚ್ಚುಹೆಚ್ಚು ನಡೆಯಬೇಕು’ ಎಂದು ಅವರು ಹೇಳಿದರು.

ನಿವೃತ್ತ ಯೋಧ ಜಾನ್‌ ಸಿ. ಥಾಮಸ್ ಉದ್ಘಾಟಿಸಿದರು. ಭೂ­ಸೇನೆಯ ಯೋಧರಾದ ಎಂ. ಗಣಪತಿ ಗೌಡ ಯಳಜಿತ ಮತ್ತು ಚಂದ್ರಶೇಖರ ಬಿ. ಟಿ. ಬಾಡ ಅವರನ್ನು ಸನ್ಮಾನಿಸಲಾ­ಯಿತು. ಆರಂಭದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾ­ಯಿತು. ಸಮಿತಿಯ ಅಧ್ಯಕ್ಷ ಸುರೇಶ ನಾಯ್ಕ್ ಸ್ವಾಗತಿಸಿ, ನಿರೂಪಿಸಿದರು. ಸುಪ್ರಭಾತ ಸುರೇಶ ವಂದಿಸಿದರು. ಶಾಲಾ ಮಕ್ಕಳಿಂದ ನೃತ್ಯ, ತೆಕ್ಕಟ್ಟೆ ಕನ್ನುಕೆರೆ ಶಿವಶಕ್ತಿ ಕಲಾತಂಡದಿಂದ ನಾಟಕ ಪ್ರದರ್ಶನಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.