ADVERTISEMENT

ಸ್ಮಶಾನ ಕಾಯುವವರಿಗೆ ಗೃಹಭಾಗ್ಯ

ಮಾದರಿಯಾದ ಗಣೇಶೋತ್ಸವ ಸಮಿತಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2015, 5:11 IST
Last Updated 23 ಸೆಪ್ಟೆಂಬರ್ 2015, 5:11 IST
ನೂತನ ಮನೆಯ ಮುಂದೆ ಉದ್ಯಾವರ ಶ್ಮಶಾನ ಕಾಯುವ ಸೋಮಯ್ಯ ಮತ್ತು ಅವರ ಕುಟುಂಬದ ಸದಸ್ಯರು. (ಶಿರ್ವ ಚಿತ್ರ)
ನೂತನ ಮನೆಯ ಮುಂದೆ ಉದ್ಯಾವರ ಶ್ಮಶಾನ ಕಾಯುವ ಸೋಮಯ್ಯ ಮತ್ತು ಅವರ ಕುಟುಂಬದ ಸದಸ್ಯರು. (ಶಿರ್ವ ಚಿತ್ರ)   

ಶಿರ್ವ: ಉದ್ಯಾವರ ಸಾರ್ವಜನಿಕ ಸ್ಮಶಾನ ದಲ್ಲಿ 30 ವರ್ಷಗಳಿಂದ ಮತ್ತು ಸಾರ್ವ ಜನಿಕವಾಗಿ ಹಲವಾರು ವರ್ಷಗಳಿಂದ ಶವಸಂಸ್ಕಾರ ನಡೆಸಿಕೊಂಡು ಬರುತ್ತಿರುವ ಸೋಮಯ್ಯ ಯಾನೆ ಕುಟ್ಟಿ ಪೂಜಾರಿಯವರಿಗೆ ನೂತನ ಗೃಹ ಭಾಗ್ಯವನ್ನು ಕರುಣಿಸುವ ಮೂಲಕ ಉದ್ಯಾವರ ಯುವಕ ಮಂಡಲದ ಆಶ್ರಯದಲ್ಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ಆದರ್ಶ ಮೆರೆದಿದೆ.

ಉದ್ಯಾವರ ಯುವಕ ಮಂಡಲದ ಆಶ್ರಯದಲ್ಲಿ, ಉದ್ಯಾವರ ಬಿಲ್ಲವ ಸಂಘದಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ಪ್ರಸ್ತುತ 26ನೇ ವರ್ಷದ ಸಂಭ್ರಮದಲ್ಲಿದ್ದು, ಕಳೆದ ವರ್ಷ ತನ್ನ ರಜತ ಮಹೋತ್ಸವದ ಸಂದರ್ಭದಲ್ಲಿ ಮನೆ ನಿರ್ಮಿಸಿ ಕೊಡುವ ಯೋಜನೆಗೆ ಚಾಲನೆ ನೀಡಿತ್ತು. ಕಳೆದ ವರ್ಷ ಸ್ಥಳೀಯ ರಮೇಶ್ ಆಚಾರಿ ಎಂಬ ವರಿಗೆ ಮನೆ ನಿರ್ಮಿಸಿ ಕೊಡಲಾಗಿದ್ದರೆ, ಪ್ರಸಕ್ತ ವರ್ಷದಲ್ಲಿ ಉದ್ಯಾವರ ಸಾರ್ವ ಜನಿಕ ಸ್ಮಶಾನದಲ್ಲಿ ಶವ ಸಂಸ್ಕಾರ ನಡೆಸಿಕೊಂಡು ಬರುತ್ತಿರುವ ಸೋಮಯ್ಯ ಅವರಿಗೆ ₹ 3.70 ಲಕ್ಷ ವೆಚ್ಚದ ಸುಂದರವಾದ ತಾರಸಿ ಮನೆಯನ್ನು ನಿರ್ಮಿಸಿಕೊಟ್ಟಿದೆ.

ತಾವು ಸಂಗ್ರಹಿಸಿದ ಸಾರ್ವಜನಿಕ ದೇಣಿಗೆ ಅಥವಾ ಚಂದಾ ಹಣವನ್ನು ಕೇವಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೇ ಮೀಸಲಾಗಿರಿಸುವ ಬಹುತೇಕ ಗಣೇಶೋತ್ಸವ ಸಮಿತಿಗಳಿಗೆ ಈ ಸಮಿತಿ ಮಾದರಿಯಾಗಿದೆ.

‘ಸಮಿತಿಯ ಜನ ಮೆಚ್ಚುವ ಕಾರ್ಯ ಕ್ರಮಗಳಿಗೆ ಸಾರ್ವಜನಿಕರಿಂದಲೂ ಪ್ರೋತ್ಸಾಹ ದೊರಕುತ್ತಿದೆ. ಎರಡು ವರ್ಷದಲ್ಲಿ ಎರಡು ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಈ ಮೂಲಕ ದುಂದು ವೆಚ್ಚದ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಿ ಜನರ ನೋವಿಗೆ ಸ್ಪಂದಿಸಲು ಚಿಂತಿ ಸಲಾಗಿದೆ. ಮುಂದಿನ ವರ್ಷ ಗಳಲ್ಲೂ ಇಂತಹುದೇ ಸಾಮಾಜಿಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು’ ಎಂದು ಸಮಿತಿಯ ಪ್ರಮುಖರಾದ ಜಿತೇಂದ್ರ ಶೆಟ್ಟಿ ಉದ್ಯಾವರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.