ADVERTISEMENT

‘ಕಾಂಗ್ರೆಸ್‌ನಿಂದ ದಾರಿ ತಪ್ಪಿಸುವ ಹೇಳಿಕೆ’

ಚುನಾವಣೆ ಸಮಯದಲ್ಲಿ ಸುಳ್ಳಿನ ರಾಜಕೀಯ–ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 6:02 IST
Last Updated 12 ಫೆಬ್ರುವರಿ 2016, 6:02 IST
‘ಕಾಂಗ್ರೆಸ್‌ನಿಂದ ದಾರಿ ತಪ್ಪಿಸುವ ಹೇಳಿಕೆ’
‘ಕಾಂಗ್ರೆಸ್‌ನಿಂದ ದಾರಿ ತಪ್ಪಿಸುವ ಹೇಳಿಕೆ’   

ಉಡುಪಿ: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಇರುವುದರಿಂದ ಜನರನ್ನು ದಾರಿತಪ್ಪಿಸಲು ನಮೂನೆ 9–11 ರದ್ದು ಮಾಡಿರುವುದಾಗಿ ಕಾಂಗ್ರೆಸ್‌ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ಉದಯ್‌ ಕುಮಾರ್‌ ಶೆಟ್ಟಿ ಆರೋಪಿಸಿದರು.

9–11 ನಮೂನೆಯಿಂದಾಗಿ ಗ್ರಾಮೀಣ ಭಾಗದ ಜನರಿಗೆ ತೀವ್ರ ತೊಂದರೆ ಆಗುತ್ತಿದೆ. ಜನರು ತಮ್ಮ ಆಸ್ತಿಯನ್ನು ಅಡವಿಡಲು ಅಥವಾ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲ ದಿನಗಳ ಹಿಂದೆ ಪತ್ರಿಕಾ ಹೇಳಿಕೆ ನೀಡಿದ ಕಾಂಗ್ರೆಸ್‌ ಮುಖಂಡರು ನಮೂನೆ 9–11 ರದ್ದು ಮಾಡಲಾಗಿದೆ ಎಂದು ತಿಳಿಸಿದ್ದರು. ಆದರೆ ವಾಸ್ತವವಾಗಿ ಇದು ರದ್ದಾಗಿಲ್ಲ. ಇ– ಸ್ವತ್ತಿನಿಂದ ಮಾತ್ರ ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೆಲ ದಿನಗಳಿಂದ ಆಸ್ತಿ ನೋಂದಣಿ ಪ್ರಕ್ರಿಯೆ ಸಂಪೂರ್ಣವಾಗಿ ನಿಂತಿದೆ. ಏಕ ನಕ್ಷೆಯನ್ನು ಸಹ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನೀಡದ ಪರಿಣಾಮ ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ ಎಂದರು.

ನಮ್ಮ ಜಿಲ್ಲೆಯವರೇ ಆದ ವಿನಯ ಕುಮಾರ್ ಸೊರಕೆ ಅವರು ನಗರಾಭಿವೃದ್ಧಿ ಸಚಿವರಾಗಿದ್ದಾರೆ. ಪ್ರಮೋದ್‌ ಮಧ್ವರಾಜ್‌ ಅವರು ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಆಗಿದ್ದಾರೆ. ಆದರೂ ಈ ಸಮಸ್ಯೆಗಳನ್ನು ಬಗೆಹರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸುಳ್ಳು ಹೇಳಿ ರಾಜಕೀಯ ಲಾಭ ಪಡೆಯಲು ಯತ್ನಿಸುವ ಬದಲು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡರೆ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಗಣೇಶ್‌ ಕುಮಾರ್‌, ರಮೇಶ್‌ ಕುಮಾರ್‌, ಕಳತ್ತೂರು ಉಮೇಶ್‌ ಶೆಟ್ಟಿ, ಪ್ರಶಾಂತ್‌ ಸಾಲಿಯಾನ್‌, ಪ್ರವೀಣ್‌ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.