ADVERTISEMENT

‘ಗಾಂಧಿ ತತ್ವ ಬುಡಮೇಲು ಮಾಡುವ ಹುನ್ನಾರ’

​ಪ್ರಜಾವಾಣಿ ವಾರ್ತೆ
Published 31 ಜನವರಿ 2015, 5:56 IST
Last Updated 31 ಜನವರಿ 2015, 5:56 IST

ಉಡುಪಿ: ‘ಮಹಾತ್ಮ ಗಾಂಧಿ ಪ್ರತಿಪಾದಿಸಿದ ತತ್ವಗಳನ್ನು ಬುಡಮೇಲು ಮಾಡುವ ಹುನ್ನಾರ ನಡೆಯುತ್ತಿದೆ. ಇಂತಹ ಪ್ರಯತ್ನವನ್ನು ಜನರೇ ಸೋಲಿಸಬೇಕು’ ಎಂದು ಶಾಸಕ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಗಾಂಧೀಜಿ ಅವರ ಹತ್ಯೆಯ ದಿನದ ನೆನಪಿಗಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹಾಗೂ ಸಹಭಾಗಿ ಸಂಘಟನೆಗಳು ನಗರದ ಸರ್ವೀಸ್ ಬಸ್‌ ನಿಲ್ದಾಣದ ಎದುರು ಶುಕ್ರವಾರ ಏರ್ಪಡಿಸಿದ್ದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು.

ದೇಶಕ್ಕೆ ಗಾಂಧೀಜಿ ನೀಡಿರುವ ಅಪಾರ ಕೊಡುಗೆಯನ್ನು ಭಾರತೀಯರು ಮರೆ­ಯು­ವಂತಿಲ್ಲ. ಅವರ ತ್ಯಾಗಕ್ಕೆ ಎಲ್ಲರೂ ಆಭಾರಿಯಾಗಿರಬೇಕು. ದೇಶದ ಪ್ರತಿ ಗ್ರಾಮ, ನಗರಕ್ಕೆ ಭೇಟಿ ನೀಡಿದ ಗಾಂಧೀಜಿ ವಾಸ್ತವಗಳನ್ನು ಮನದಟ್ಟು ಮಾಡಿ­ಕೊಂಡು ತತ್ವಗಳನ್ನು ಪ್ರತಿಪಾದಿಸಿದರು. ಜಾತಿ, ಧರ್ಮದ ಆಧಾರದ ಮೇಲೆ ಸಮಾಜವನ್ನು ಒಡೆಯುವ ಪ್ರವೃತ್ತಿ ಸರಿಯಲ್ಲ. ಸಮಾಜವನ್ನು ಒಡೆದರೆ ಸ್ವಾತಂತ್ರ್ಯ­ವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ­ದರು.

ಎಲ್ಲರೂ ಒಗ್ಗಟ್ಟಾಗಿದ್ದಾಗ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದು ಅಭಿಪ್ರಾಯ­ಪಟ್ಟರು.
ನಗರಸಭೆ ಅಧ್ಯಕ್ಷ ಪಿ. ಯುವರಾಜ ಮಾತನಾಡಿ, ಗಾಂಧೀಜಿ ಅವರು ದೇಶಕ್ಕಾಗಿ ಮಾಡಿದ ತ್ಯಾಗವನ್ನು ನೆನಪಿನಲ್ಲಿಟ್ಟುಕೊಂಡು ಮುಂದೆ ಸಾಗಬೇಕು ಎಂದರು.

ಗಡಿಯಾರ ಗೋಪುರದಲ್ಲಿರುವ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಲಾಯಿತು. ಬೆಳಿಗ್ಗೆಯಿಂದ ಸಂಜೆ ವರೆಗೆ ಉಪನ್ಯಾಸ, ಭಕ್ತಿ ಸಂಗೀತ ಕಾರ್ಯಕ್ರಮಗಳು ನಡೆದವು.

ಕೋಮು ಸೌಹಾರ್ದ ವೇದಿಕೆಯ ಅಧ್ಯಕ್ಷ ಜಿ. ರಾಜಶೇಖರ್‌, ಕೆ. ಫಣಿರಾಜ್‌, ಹಯವದನ ಉಪಾಧ್ಯ, ಉದ್ಯಾವರ ನಾಗೇಶ್‌ ಕುಮಾರ್‌, ಜ್ಯೋತಿ ಗುರುಪ್ರಸಾದ್‌, ಹುಸೇನ್‌ ಕೋಡಿ­ಬೆಂಗ್ರೆ, ಇದ್ರಿಸ್‌ ಹೂಡೆ, ಶ್ರೀಧರ ಭಟ್‌, ಗೋಪಾಲ್‌ ಶೆಟ್ಟಿ, ಲೂಯಿಸ್‌ ಲೋಬೊ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.