ADVERTISEMENT

‘ದೇಶದ ಮಾದರಿ ಗ್ರಾಮವಾಗಿ ಶಿರೂರು’

ಸಂಸದರ ಆದರ್ಶ ಗ್ರಾಮ ಯೋಜನೆಗೆ ಚಾಲನೆ : ಸಾಕ್ಷಿಯಾದ ಆರು ಸಚಿವರು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 12:25 IST
Last Updated 19 ಏಪ್ರಿಲ್ 2015, 12:25 IST

ಶಿರೂರ (ಬೈಂದೂರು):  ಪ್ರಧಾನ ಮಂತ್ರಿ ಗಳು ರೂಪಿಸಿರುವ ಸಂಸದರ ಆದರ್ಶ ಗ್ರಾಮ ಯೋಜನೆಗೆ ಕುಂದಾಪುರ ತಾಲ್ಲೂಕಿನ ಶಿರೂರನ್ನು ಆಯ್ಕೆಮಾಡಿ ಕೊಂಡಿರುವ ರಾಜ್ಯ ಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್ ಕೇಂದ್ರ, ರಾಜ್ಯ ಸರ್ಕಾರ ಗಳ ಯೋಜನೆ, ಸ್ಥಳೀಯ ದಾನಿಗಳ ಕೊಡುಗೆ ಬಳಸಿಕೊಂಡು ಶಿರೂರನ್ನು ದೇಶದ ಮಾದರಿ ಗ್ರಾಮವಾಗಿ ಅಭಿ ವೃದ್ಧಿಪಡಿಸಲಾಗುವುದು ಎಂದು ಘೋಷಿಸಿದರು.

ಇಲ್ಲಿನ ಗ್ರೀನ್‌ ವ್ಯಾಲಿ ಶಾಲೆಯಲ್ಲಿ ಶನಿವಾರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಅವರು ಇದನ್ನು ಪ್ರಕಟಿಸಿದರು. ’ಅಗತ್ಯ ಮೂಲ ಸೌಲಭ್ಯಗಳಾದ ಸಂಪರ್ಕ, ಕುಡಿಯುವ ನೀರು, ಬೀದಿದೀಪ, ಪಡಿ ತರ,  ಒದಗಿಸುವುದರ ಜತೆಗೆ ಎಲ್ಲರಿಗೆ ಗುಣಮಟ್ಟದ ಶಿಕ್ಷಣ, ಆರೋಗ್ಯ, ಉದ್ಯೋಗ ಖಾತರಿಗೊಳಿಸಲಾಗುವುದು. ಯೋಜನೆಗೆ ಚಾಲನೆ ನೀಡುವ ಇಂದಿನ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ನಗರಾಭಿವೃದ್ಧಿ, ಬಂದರು ಮತ್ತು ಮೀನುಗಾರಿಕೆ, ಅರಣ್ಯ ಸಚಿವರನ್ನು ಕರೆಸಿಕೊಳ್ಳಲಾಗಿದೆ. ಅವರ ಇಲಾಖೆಗಳಿಂದ ಶಿರೂರಿಗೆ ಮಹತ್ವದ ಯೋಜನೆಗಳು ಬರಲಿವೆ’ ಎಂದು ಆಸ್ಕರ್ ಫರ್ನಾಂಡೀಸ್ ಹೇಳಿದರು. 

ಗೋಷ್ಠಿಯ ಕೊನೆಯಲ್ಲಿ ಮಾತ ನಾಡಿದ  ಶಾಸಕ ಕೆ. ಗೋಪಾಲ ಪೂಜಾರಿ ಸಿಆರ್‌ಝಡ್, ಮೀನುಗಾರಿಕಾ ಮನೆ, ದೋಣಿಗಳಿಗೆ ಸೀಮೆ ಎಣ್ಣೆ, ಡೀಸೆಲ್ ಸಬ್ಸಿಡಿ, ಇತ್ಯಾದಿ ಸಮಸ್ಯೆಗಳನ್ನು ಪರಿ ಹರಿಸುವಂತೆ, ಶಿರೂರನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸದಂತೆ ಸಂಬಂಧಿಸಿದ ಸಚಿವರಿಗೆ ಮನವಿ ಮಾಡಿದರು.

ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಎಂ. ಎ. ಗಫೂರ್ ಸ್ವಾಗತಿಸಿದರು. ಸಚಿವರಾದ ಟಿ. ಬಿ. ಜಯಚಂದ್ರ, ಎಚ್‌. ಕೆ. ಪಾಟೀಲ್, ಯು. ಟಿ. ಖಾದರ್, ವಿನಯಕುಮಾರ ಸೊರಕೆ, ಅಭಯಚಂದ್ರ ಜೈನ್, ರಮಾ ನಾಥ ರೈ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕ ಬಸವರಾಜ್, ಬ್ಲೋಸಮ್ ಫರ್ನಾಂಡಿಸ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಸ್. ರಾಜು ಪೂಜಾರಿ, ಸಾವಿತ್ರಿ ಅಳ್ವೆಗದ್ದೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮ ಮೇಸ್ತ, ಗ್ರೀನ್ ವ್ಯಾಲಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸಯ್ಯದ್ ಅಬ್ದುಲ್ ಖಾದರ್ ಬಾಶು, ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.