ADVERTISEMENT

‘ವಿದ್ಯೆಯ ಜತೆ ಕಲೆ ಮೇಳೈಸಿದರೆ ಸಂಪನ್ನ ವ್ಯಕ್ತಿತ್ವ’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 11:16 IST
Last Updated 2 ಮಾರ್ಚ್ 2015, 11:16 IST

ಬೈಂದೂರು: ‘ಕಳೆದ 21 ವರ್ಷಗಳಿಂದ ಮೂಡುಬಿದರೆಯಲ್ಲಿ ಆಳ್ವಾಸ್ ನುಡಿಸಿರಿ, ವಿರಾಸತ್ ಕಾರ್ಯಕ್ರಮ ವಿದ್ಯಾರ್ಥಿಗಳ ಮೇಲೆ ಗಾಢಪ್ರಭಾವ ಬೀರಿದೆ. ಅದರ ಫಲವಾಗಿ ಈಗ ಅವರೇ ತರಬೇತಿ ಪಡೆದು ಆ ಎಲ್ಲ ಕಲಾ ಪ್ರಕಾರಗಳಲ್ಲಿ ಪರಿಣತಿ ಸಾಧಿಸಿ, ಪ್ರದರ್ಶನ ನೀಡುತ್ತಿದ್ದಾರೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ಆಳ್ವಾಸ್ ನುಡಿಸಿರಿ ವಿರಾಸತ್‌ನ ಬೈಂದೂರು ಘಟಕದ ಆಶ್ರಯದಲ್ಲಿ ಶನಿವಾರ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತ-­ನಾಡಿದರು.

ಕೇವಲ ಕಲೆಯಲ್ಲಿ ಅಷ್ಟೇ ಅಲ್ಲದೇ ಶಿಕ್ಷಣದಲ್ಲೂ ಮಹತ್ವದ ಸಾಧನೆ ಮಾಡಿ ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಇದು ವಿದ್ಯೆಯ ಜತೆ ಕಲೆ. ಸಂಸ್ಕೃತಿ ಮೇಳೈಸಿದರೆ ಸಂಪನ್ನ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎನ್ನುವುದಕ್ಕೆ ಸಾಕ್ಷಿ’ ಎಂದರು.

ಶಾಸಕ ಕೆ. ಗೋಪಾಲ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಬಿ. ಎಂ. ಸುಕುಮಾರ ಶೆಟ್ಟಿ ಉದ್ಘಾಟಿಸಿದರು. ಉತ್ಸವದ ಸಂಚಾಲಕ ಯು. ದಿವಾಕರ ಶೆಟ್ಟಿ ಹಾಗೂ ಗಣ್ಯರನೇಕರು ವೇದಿಕೆ­ಯಲ್ಲಿದ್ದರು.

200 ವಿದ್ಯಾರ್ಥಿಗಳು ಭರತ ನಾಟ್ಯ, ಬಂಜಾರ ನೃತ್ಯ, ಯಕ್ಷಗಾನ, ಮಣಿಪುರಿ ಸ್ಟಿಕ್ ಡಾನ್ಸ್‌, ದೋಲ್‌ ಚಲಮ್‌, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಜಾನಪದ ನೃತ್ಯ, ಮಹಾರಾಷ್ಟ್ರ­ದ ಲಾವಣಿ ನೃತ್ಯ, ಕಥಕ್, ವಂದೇ ಮಾತರಂ, ಪುರುಲಿಯಾ ಛಾವೊ, ಪಂಜಾಬಿ ಜಿಂದ್ವಾ ಮತ್ತು ‘ಬರ್ಬರೀಕ’ ನಾಟಕ ಪ್ರದರ್ಶಿಸುವ ಮೂಲಕ ಸೇರಿದ್ದ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದರು.

ಆನಂದ ಮದ್ದೋಡಿ ಸ್ವಾಗತಿಸಿದರು. ಘಟಕದ ಗೌರವಾಧ್ಯಕ್ಷ ಓಂ ಗಣೇಶ್‌ ಮತ್ತು ಅಧ್ಯಕ್ಷ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕವಾಗಿ ಮಾತ­ನಾ­ಡಿದರು. ರಾಮಕೃಷ್ಣ ದೇವಾಡಿಗ ವಂದಿಸಿದರು. ಎಸ್. ಅರುಣ­ಕುಮಾರ್ ಮತ್ತು ಸುಬ್ರಹ್ಮಣ್ಯ ಜಿ. ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.