ADVERTISEMENT

‘ಶಿಕ್ಷಕರೇ ದೌರ್ಜನ್ಯ ತಡೆಗೆ ಮುಂದಾಗಿ’

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2014, 7:09 IST
Last Updated 26 ನವೆಂಬರ್ 2014, 7:09 IST

ಉಡುಪಿ: ‘ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಾಗಿದ್ದು’ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿ­ವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಎಲ್ ಗೊನ್ಸಾಲಿಸ್ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಂಯುಕ್ತವಾಗಿ ಉಡುಪಿ ತಾಲ್ಲೂಕು ಪಂಚಾಯಿತಿ ಸಭಾಂಗಣ­ದಲ್ಲಿ ಜಿಲ್ಲೆಯ ಶಾಲಾ ಶಿಕ್ಷಕರಿಗೆ ಮಂಗಳವಾರ ಏರ್ಪಡಿಸಿದ್ದ ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ -೨೦೧೨’ (ಪೋಕ್ಸೋ) ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಪೋಕ್ಸೊ ಕಾಯಿದೆ ಜಾರಿಗೆ ಬಂದ ನಂತರ ಜನರಲ್ಲಿ ಅರಿವು ಮೂಡಿದ್ದು, ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ, ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಶಾಲೆಯಲ್ಲಿಯೇ ಕಳೆಯುವುದರಿಂದ ಮಕ್ಕಳ ಸಂಪೂರ್ಣ ಚಟುವಟಿಕೆಗಳ ಬಗ್ಗೆ ಶಿಕ್ಷಕರಿಗೆ ಅರಿವಿರುತ್ತದೆ.

ದೌರ್ಜನ್ಯಕ್ಕೊಳಗಾದ ಮಕ್ಕಳು  ಆಘಾತಕ್ಕೊಳಗಾಗಿ, ತಮ್ಮ ದೈನಂದಿನ ಚಟುವಟಿಕೆಗಳಿಗಿಂತ ಭಿನ್ನ­ವಾಗಿ ವರ್ತಿಸುವುದಲ್ಲದೇ, ಮಾನಸಿಕ ಖಿನ್ನತೆಗೊಳಗಾಗುತ್ತಾರೆ. ಶಿಕ್ಷಕರು ಅಂತಹ ಮಕ್ಕಳನ್ನು ಗುರುತಿಸಿ ಕ್ರಮಕೈ­ಗೊಂಡು  ಮುಂದಾಗುವ ಅನಾಹು­ತಗಳನ್ನು ತಪ್ಪಿಸಲು ಪ್ರಯತ್ನಿಸಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುನೀತಾ ನಾಯ್ಕ್‌ ಕಾರ್ಯಾಗಾರ ಉದ್ಘಾಟಿಸಿದರು. ಉಪಾಧ್ಯಕ್ಷ ಗಣೇಶ್ ಕುಮಾರ್, ಸಂಪನ್ಮೂಲ ವ್ಯಕ್ತಿ ಸತೀಶ್ ನಾಯಕ್ ಉಪಸ್ಥಿತರಿದ್ದರು. ಮಕ್ಕಳ ಹಕ್ಕು ರಕ್ಷಣಾಧಿಕಾರಿ ರಾಜೇಂದ್ರ ಬೇಕಲ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.