ADVERTISEMENT

‘ಹವಿಗನ್ನಡದಲ್ಲಿ ಬರೆಯುವ ಪ್ರಯತ್ನ ನಿರಂತರ ನಡೆಯಲಿ’

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ: ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2015, 6:00 IST
Last Updated 20 ಏಪ್ರಿಲ್ 2015, 6:00 IST
‘ಹವಿಗನ್ನಡದಲ್ಲಿ ಬರೆಯುವ ಪ್ರಯತ್ನ ನಿರಂತರ ನಡೆಯಲಿ’
‘ಹವಿಗನ್ನಡದಲ್ಲಿ ಬರೆಯುವ ಪ್ರಯತ್ನ ನಿರಂತರ ನಡೆಯಲಿ’   

ಬದಿಯಡ್ಕ: ಅತ್ಯಂತ ಪ್ರಭಾವಶಾಲಿ, ಆತ್ಮೀಯತೆಯ ಭಾಷೆ ಆಗಿರುವ ಹವಿಗನ್ನಡ, ಹಳೆಗನ್ನಡ ಭಾಷೆಯ ರೂಪಾಂತರ. ಈ ಭಾಷೆಯನ್ನು ಉಳಿ ಸುವುದು ಬೆಳೆಸುವುದು ಹವ್ಯಕರ ಕೈಯಲ್ಲೇ ಇದೆ. ಈ ಭಾಷೆಯ ಸೊಗಡನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಒಪ್ಪಣ್ಣ ಬಳಗ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮದುರೆ ಕಾಮರಾಜ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಹರಿಕೃಷ್ಣ ಭರಣ್ಯ ಹೇಳಿದರು.

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಈ ವರ್ಷದಿಂದ ಆಂಭಿಸಿರುವ ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿಯನ್ನು ಭಾನುವಾರ ನೀರ್ಚಾಲ್‌ನ ಮಹಾಜನ ಸಂಸ್ಕೃತ ಕಾಲೇಜು ಹೈಯರ್‌ ಸೆಕೆಂಡರಿ ಶಾಲೆಯ ಸಭಾಂಗಣದಲ್ಲಿ ‘ಕಲಾ ದರ್ಶನ’ದ ಸಂಪಾದಕ ವಿ.ಬಿ. ಹೊಸಮನೆ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.

‘ಹವ್ಯಕೇತರ ಸಮಾಜದ ಹಲವರು ಹವಿಗನ್ನಡ ಸಾಹಿತ್ಯದಲ್ಲಿ ಸಾಧನೆ ಮಾಡಿದ್ದಾರೆ. ಆದರೆ, ಸ್ವತಃ ಹವ್ಯಕರಾಗಿದ್ದುಕೊಂಡು ಆ ಭಾಷೆಯ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಕಡಿಮೆ. ಇದನ್ನು ಸವಾಲಾಗಿ ಸ್ವೀಕರಿಸಿ, ಇತರ ಭಾಷೆಗಳಲ್ಲಿ ಸಾಹಿತ್ಯ ಬರೆಯುವ ಹವ್ಯಕರು ಹವಿಗನ್ನಡದಲ್ಲಿ ಬರೆಯುವುದಕ್ಕೆ ಮುಂದಾಗಬೇಕು’ ಎಂದರು.

ಬಾಳಿಲ ಪರಮೇಶ್ವರ ಭಟ್ಟರನ್ನು ಸ್ಮರಿಸಿದ ಅವರು, ಭಟ್ಟರು ಹವಿಗನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಲೆ ಮರೆ ಕಾಯಿಯಂತೆ ಕೆಲಸ ಮಾಡಿದವರು. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ ಎಂದರು.

ಹಿರಿಯ ಯಕ್ಷಗಾನ ಅರ್ಥಧಾರಿ ಬೆಳ್ಳಿಗೆ ನಾರಾಯಣ ಮಣಿಯಾಣಿ ಮಾತನಾಡಿ, ``ಹವಿಗನ್ನಡ ಅತ್ಯಂತ ಸಂಸ್ಕಾರಯುತ ಭಾಷೆ. ಯಾವುದೇ ಭಾಷೆಗೆ ಸಾಹಿತ್ಯ ಕ್ರೀಡಾಂಗಣ ಇದ್ದಂತೆ. ಮುಳಿಯ ತಿಮ್ಮಪ್ಪಯ್ಯ, ಕಡೆಂಗೋಡ್ಳು ಶಂಕರ ಭಟ್ಟ ಸೇರಿದಂತೆ ಹಲವರು ವಿದ್ವಾಂಸರು ಹವ್ಯಕ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಒಪ್ಪಣ್ಣ ಪ್ರತಿಷ್ಠಾನವು ಈ ಭಾಷೆಯನ್ನು ಉಳಿಸಿ ಬೆಳೆಸುವುದಕ್ಕೆ ಹೊರಟಿರುವುದು ಮೆಚ್ಚತಕ್ಕ ಕಾರ್ಯ ಎಂದರು.

ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ ಸ್ವೀಕರಿಸಿ ವಿ. ಬಿ. ಹೊಸಮನೆ ಮಾತನಾಡಿದರು.
ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾ ಪಕರಾದ ಜಯದೇವ ಖಂಡಿಗೆ ಅತಿಥಿ ಯಾಗಿದ್ದರು. ಪ್ರತಿಷ್ಠಾನದ ಗೌರವ ಅಧ್ಯಕ್ಷ ಈಶ್ವರ ಭಟ್. ಎಸ್. ಎಳ್ಯಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರಿನ ಪ್ರಸಾದ್ ಪವರ್ ಎಂಜಿನಿ ಯರ್ಸ್ ಮಾಲೀಕರಾದ ಶ್ಯಾಮಪ್ರಸಾದ್ ಬಿ. ಅವರು ವಿಷು ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು. ಬಹುಮಾನ ಪಡೆದವರ ಪರವಾಗಿ ಗುಣಾಜೆ ರಾಮಚಂದ್ರ ಭಟ್ ಮಾತನಾಡಿದರು.

ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಕೃಷ್ಣ ಶರ್ಮ ಹಳೆಮನೆ ಸ್ವಾಗತಿಸಿದರು. ಗೋಪಾಲಕೃಷ್ಣ ಭಟ್ ಬೊಳುಂಬು ನಿರೂಪಿಸಿದರು. ರಘುರಾಮ ಮುಳಿಯ ವಂದಿಸಿದರು.

ಹೊಸ ವೆಬ್‍ಸೈಟ್ ಲೋಕಾರ್ಪಣೆ:
ಬೆಂಗಳೂರಿನ ಧ್ಯೇಯ ಸಾಫ್ಟ್‌ವೇರ್‌ ಸಂಸ್ಥೆಯ ರವಿನಾರಾಯಣ ಗುಣಾಜೆ ಅವರು ವಿನ್ಯಾಸ ಮಾಡಿರುವ ಪ್ರತಿಷ್ಠಾನದ ನೂತನ ವೆಬ್‌ಸೈಟ್‌ ಅನ್ನು (oppanna.org) ಅನ್ನು ಲೋಕಾರ್ಪಣೆ ಮಾಡಲಾಯಿತು.

ವಿದುಷಿ ವಿಜಯ ಪ್ರಕಾಶ್ ಬೆದ್ರಡಿ ಕಲ್ಲಕಟ್ಟ ಮತ್ತು ಶಿಷ್ಯರಿಂದ  ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಿತು. ಪುತ್ತೂರು ರಮೇಶ್ ಭಟ್ ಮತ್ತು ತಂಡದವರು ಪ್ರದರ್ಶಿಸಿದ ‘ಪ್ರಮೀಳಾರ್ಜುನ’ ಯಕ್ಷಗಾನ ಬಯಲಾಟ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.