ADVERTISEMENT

‘ಹಿರಿಯರ ಅನುಭವ ಕಿರಿಯರಿಗೆ ಮಾರ್ಗದರ್ಶನ’

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2014, 9:16 IST
Last Updated 2 ಅಕ್ಟೋಬರ್ 2014, 9:16 IST

ಉಡುಪಿ: ‘ಜೀವನದಲ್ಲಿ ಹಿರಿಯರ ಪಾತ್ರ ಮಹತ್ವವಾದದ್ದು ಮತ್ತು ಅವರ ಜ್ಞಾನ– ಅನುಭವಗಳು ಕಿರಿಯರಿಗೆ ಮಾರ್ಗದರ್ಶನ ನೀಡುತ್ತವೆ. ಹಿರಿಯರ ಮತ್ತು ಕಿರಿಯರ ನಡುವೆ ಹೊಂದಾಣಿಕೆ ಇದ್ದಾಗ ಮಾತ್ರ ಜೀವನ ಸುಖಮಯ ವಾಗಿ ಸಾಗುತ್ತದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಶಿವಶಂಕರ ಬಿ. ಅಮರಣ್ಣನವರ್‌ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ವಕೀಲರ ಸಂಘ, ಉಡುಪಿ, ಕಾರ್ಕಳ ಮತ್ತು ಕುಂದಾಪುರ ಹಿರಿಯ ನಾಗರಿಕರ ಸಂಸ್ಥೆ ಹಾಗೂ ಜಿಲ್ಲಾ ಮಹಿಳಾ ಒಕ್ಕೂಟ ಮತ್ತು ಜಿಲ್ಲಾ ವೃದ್ಧಾಶ್ರಮಗಳು ಸಂಯುಕ್ತವಾಗಿ ನಗರದ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜಿನ ನೂತನ ರವೀಂದ್ರ ಮಂಟಪ ದಲ್ಲಿ ಬುಧವಾರ ಏರ್ಪಡಿಸಿದ್ದ ‘ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯರ ಇಷ್ಟಗಳನ್ನು ಪೂರೈಸುವ ಹೊಣೆ ಕಿರಿಯರ ಮೇಲಿದೆ. ಹಿರಿಯರು ಜೀವನದ ಅನುಭವಗಳನ್ನು ಕಿರಿಯರಿಗೆ ಧಾರೆ ಎರೆದು, ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್‌ ಮಾತನಾಡಿ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ರಾಜ್ಯದ 7 ಜಿಲ್ಲೆಗಳಲ್ಲಿ ಈಗಾ ಗಲೇ ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಇಂದಿನಿಂದ ದಿನದ 24ಗಂಟೆಗಳ ಕಾಲ ಉಚಿತ ಸಹಾಯವಾಣಿ ಸಂಖ್ಯೆ (10 90) ಕಾರ್ಯನಿರ್ವಹಿಸಲಿದೆ ಎಂದರು.

ಜಿಲ್ಲಾವರು ಹಿರಿಯರು ವಾಸಿಸುವ ಒಂಟಿ ಮನೆಗಳನ್ನು ಪತ್ತೆಹಚ್ಚಿ ಸೂಕ್ತ ಭದ್ರತೆ ನೀಡುವುದಕ್ಕೆ ಕ್ರಮ ಕೈಗೊಳ್ಳ ಲಾಗುವುದು. ಸಮಾಜಘಾತುಕ ಶಕ್ತಿ ಗಳನ್ನು ಸದೆಬಡಿದು, ಸಾರ್ವಜನಿಕರಿಗೆ ಧೈರ್ಯ ತುಂಬುವ ಕೆಲಸವನ್ನು ಪೊಲೀಸ್‌ ಇಲಾಖೆ ಮಾಡುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಸ್‌.ಎಸ್‌. ಪಟ್ಟಣ ಶೆಟ್ಟಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಕನಗವಲ್ಲಿ, ವಕೀಲರ ಸಂಘದ ಕಾರ್ಯ ದರ್ಶಿ ದೇವದಾಸ್‌ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್‌, ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸರಳ ಕಾಂಚನ್‌, ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ಕಾರ್ಯದರ್ಶಿ ಸಿ.ಎಸ್‌. ರಾವ್‌, ಎಸ್‌.ಎಸ್‌. ಕುಮಾರ್‌, ಕೆ.ಆರ್‌. ನಾಯಕ್‌, ರಾಧ ದಾಸ್‌, ಜಿಲ್ಲಾ ಸರ್ಜನ್‌ ಡಾ. ಆನಂದ ನಾಯ್ಕ್‌ ಮತ್ತಿತರರು ಉಪಸ್ಥಿತರಿದ್ದರು.

ಸುಲೋಚನಾ ಕೊಡವೂರು ಪ್ರಾರ್ಥಿ ಸಿದರು, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಎಂ. ನಿರಂಜನ್‌ ಭಟ್‌ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.