ADVERTISEMENT

‘ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಕಳವಳಕಾರಿ’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 11:16 IST
Last Updated 2 ಮಾರ್ಚ್ 2015, 11:16 IST

ಸುಬ್ರಹ್ಮಣ್ಯ;  ರಾಜ್ಯದಲ್ಲಿ ಹೆಣ್ಣು ಶಿಶುಗಳ ಅಸಹಜ ಮರಣ ಹಾಗೂ ಹೆಣ್ಣುಮಕ್ಕಳ ನಿಗೂಢ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದರ ಬಗ್ಗೆ ಆತಂಕದ ವ್ಯಕ್ತಪಡಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸಾ ಅವರು, ಅತ್ಯಾಚಾರ ಮತ್ತು ಮೂಢನಂಬಿಕೆಗಳ ಹೆಸರಿನಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಡೆಯುತ್ತಿರುವುದು ತೀವ್ರ ಕಳವಳಕಾರಿಯಾದದು ಎಂದು ಹೇಳಿದರು.

ನಾಲ್ಕೂರು ಗ್ರಾಮದ ಉತ್ರಂಬೆ ಎಂಬಲ್ಲಿ ಇತ್ತೀಚೆಗೆ ಯುವತಿ ಅಕ್ಷಿತಾ ಬೆಂಕಿಗಾಹುತಿಯಾದ ಅವಘಡ ನಡೆದ ಸ್ಥಳಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಮನೆಯ ಸದಸ್ಯರಿಂದ, ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ ಪಡೆದು ಬಳಿಕ ಮಾತನಾಡಿದರು.

ಅಕ್ಷಿತಾ ಸಾವಿನ  ಪ್ರಕರಣದ ಕುರಿತಂತೆ ಮನೆ­ಯವರಿಗೆ ಮತ್ತು ಸ್ಥಳಿಯರಲ್ಲಿ ಹಲವಾರು ಶಂಕೆಗಳು ವ್ಯಕ್ತವಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ವಸ್ತುನಿಷ್ಠ  ತನಿಖೆಯ ಅಗತ್ಯವಿದೆ. ಯುವತಿಯ  ಮೃತದೇಹ ದೊರೆತ  ಸ್ಥಿತಿ ನೋಡಿದರೆ ಆಕೆ ಅಲುಗಾಡಲೂ ಅವಕಾಶ ಸಿಗಲಿಲ್ಲ ಎಂಬುದು ಗೊತ್ತಾಗುತ್ತದೆ. ಮೇಲ್ನೋಟಕ್ಕೆ ಇದು ಕೊಲೆ ಎಂಬುದನ್ನು  ಅಲ್ಲಗೆಳೆಯುವಂತಿಲ್ಲ. ಹಾಗಾಗಿ ಸಮಗ್ರ ತನಿಖೆುಂದಷ್ಟೆ ಸತ್ಯಾಸತ್ಯತೆ ಹೊರಬರಲು ಸಾಧ್ಯ ಎಂದರು.

‘ಯುವತಿ ಅಕ್ಷಿತಾ ಹಾಗೂ ಇದೇ ಗ್ರಾಮದ ಚಾರ್ಮತ ಎಂಬಲ್ಲಿ ಈ ಹಿಂದೆ ನಡೆದ ವಾಮಾ­ಚಾರಕ್ಕೆ ಬಲಿಕೊಡಲಾಗಿದೆ ಎನ್ನುವ ಸಂಶಯಾಸ್ಪದ ಪ್ರಕರಣ  ಹಸುಳೆ ಶಾರಿಕಾ ನಿಗೂಢ ಸಾವಿನ ಇವೆ­ರಡು ಪ್ರಕರಣಗಳ ಬಗ್ಗೆ ಸೂಕ್ತ ತನಿಖೆ ನಡೆಯಲು ಸರ್ವ ರೀತಿಯ ಕ್ರಮಕ್ಕೆ ವಹಿಸುತ್ತೇನೆ’ ಎಂದರು.

ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಸ್ಥಳದಲ್ಲಿದ್ದು ಎರಡು ಪ್ರಕರಣಕ್ಕೆ ಸಂಬಂಧಿಸಿ ಆಯೋಗದ ಅಧ್ಯಕ್ಷರಿಗೆ ಮಾಹಿತಿಯನ್ನು ನೀಡಿದರು.

ಸುಬ್ರಹ್ಮಣ್ಯ ಠಾಣಾಧಿಕಾರಿ ನಾಗೇಶ ಕದ್ರಿ, ಸಿಬ್ಬಂದಿ ಸಂಧ್ಯಾಮಣಿ, ಚಂದ್ರಶೇಖರ ಯು, ಗುತ್ತಿಗಾರು ಗ್ರಾ,ಪಂ ಅಧ್ಯಕ್ಷೆ ಪ್ರಮೀಳಾ ಶಶಿಧರ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಪರಶುರಾಮ ಚಿಲ್ತಡ್ಕ, ಪದ್ಮನಾಭ ಮರಕತ, ರವಿಕಲಾ ಚಿಮ್ನೂರು ಇತರರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.