ADVERTISEMENT

2 ದಿನಕ್ಕೊಮ್ಮೆ ನೀರು ಪೂರೈಸಲು ಚಿಂತನೆ

ಎಂ.ನವೀನ್ ಕುಮಾರ್
Published 11 ಜನವರಿ 2017, 10:27 IST
Last Updated 11 ಜನವರಿ 2017, 10:27 IST
2 ದಿನಕ್ಕೊಮ್ಮೆ ನೀರು ಪೂರೈಸಲು ಚಿಂತನೆ
2 ದಿನಕ್ಕೊಮ್ಮೆ ನೀರು ಪೂರೈಸಲು ಚಿಂತನೆ   

ಉಡುಪಿ: ಉಡುಪಿ ನಗರಕ್ಕೆ ನೀರು ಪೂರೈಸುವ ಬಜೆ ಜಲಾಶಯದ ಒಳ ಹರಿವು ಒಂದೆರಡು ದಿನಗಳಲ್ಲಿ ನಿಲ್ಲಲಿದ್ದು, ಪ್ರತಿ ದಿನದ ಬದಲು ಎರಡು ದಿನಕ್ಕೊಮ್ಮೆ ನೀರು ಪೂರೈಸುವ ಬಗ್ಗೆ ನಗರಸಭೆ ನಿರ್ಧಾರ ತೆಗೆದುಕೊಳ್ಳಲಿದೆ.

ಉಡುಪಿ ನಗರದಲ್ಲಿ ಒಟ್ಟು 19,800 ನಲ್ಲಿ ಸಂಪರ್ಕಗಳಿದ್ದು, ಪ್ರಸ್ತುತ ಪ್ರತಿ ದಿನ ನೀರು ನೀಡಲಾಗುತ್ತಿದೆ. ನಗರಕ್ಕೆ ಹೊಂದಿಕೊಂಡಿರುವ ಬೊಮ್ಮ ರಬೆಟ್ಟು, ಅಂಜಾರು, ಅತ್ರಾಡಿ, ಬಡಗ ಬೆಟ್ಟು, ಅಲೆವೂರು, ಅಂಬಲಪಾಡಿ, ಕಡೆಕಾಡು ಗ್ರಾಮ ಪಂಚಾಯಿತಿಗಳಿಗೂ ನಗರಸಭೆಯೇ ನೀರು ಪೂರೈಕೆ ಮಾಡುತ್ತಿದೆ. ಒಳ ಹರಿವು ನಿಂತ ನಂತರ ಜೂನ್‌ ವರೆಗೆ ಆರು ತಿಂಗಳ ಕಾಲ ಪ್ರತಿ ದಿನ ನೀರು ಪೂರೈಕೆ ಮಾಡುವಷ್ಟು ಸಂ ಗ್ರಹ ಇರುವುದಿಲ್ಲ. ನೀರಿನ ಒತ್ತಡವೂ ಕಡಿಮೆಯಾಗುವುದರಿಂದ ಎತ್ತರದ ಪ್ರದೇಶಗಳಿಗೆ ನೀರು ತಲುಪುವುದು ಕಷ್ಟಸಾಧ್ಯವಾಗುತ್ತದೆ.

ಬಜೆ ಜಲಾಶಯಕ್ಕೂ ಹಿಂದೆ ಇರುವ ಶಿರೂರು ಜಲಾಶಯಕ್ಕೆ ಮರಳು ಚೀಲಗ ಳನ್ನು ಜೋಡಿಸಿ ನೀರಿನ ಸಂಗ್ರಹ ಹೆಚ್ಚು ಮಾಡಲು ಈಗಾಗಲೇ ಕ್ರಮ ಕೈಗೊಂಡಿ ರುವುದರಿಂದ ಅಧಿಕ ನೀರು ಲಭ್ಯವಾ ಗುವ ನಿರೀಕ್ಷೆ ಇದೆ. ಏನೇ ಆದರೂ ಕೊನೆಯ ಎರಡು ತಿಂಗಳು ನೀರಿನ ಸಮಸ್ಯೆ ತೀವ್ರವಾಗುವ ನಿರೀಕ್ಷೆ ಇದೆ.

ADVERTISEMENT

ಆದ್ದರಿಂದ ಇರುವ ನೀರನ್ನು ಮಿತವಾಗಿ ಬಳಸಿಕೊಳ್ಳಲು ನಗರಸಭೆ ಹಲವು ಕ್ರಮ ಕೈಗೊಳ್ಳಲಿದೆ. ಮಣಿಪಾಲ ವಿಶ್ವವಿದ್ಯಾಲಯವೊಂದಕ್ಕೆ ಪ್ರತಿದಿನ 45 ಲಕ್ಷ ಲೀಟರ್ ನೀರು ನೀಡಲಾಗುತ್ತಿದ್ದು, ಈ ಪ್ರಮಾಣವನ್ನು ಕಡಿಮೆ ಮಾಡುವ ಸಾಧ್ಯತೆಯೂ ಇದೆ. ಜೂನ್‌ಗಿಂತ ಮೊದಲೇ ಉತ್ತಮ ಮಳೆಯಾದರೆ ಸಮಸ್ಯೆ ಬಗೆಹರಿಯಲಿದೆ.
ಅಗತ್ಯ ಇರುವೆಡೆ ಟ್ಯಾಂಕರ್‌ ಮೂಲಕ ಸಹ ನೀರು ಪೂರೈಸಲಾಗು ತ್ತದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ಟ್ಯಾಂ ಕರ್‌ ಮೂಲಕ ನೀರು ಪೂರೈಸಲು ಜಿಲ್ಲಾಧಿಕಾರಿ ಅನುದಾನ ನೀಡಲಿದ್ದಾರೆ.

ಎರಡನೇ ಜಲಾಶಯ: ಪ್ರತಿ ವರ್ಷ ಮಳೆಯ ಪ್ರಮಾಣ ಕಡಿಮೆ ಆಗುತ್ತಿ ರುವುದರಿಂದ ಹಾಗೂ ನಗರದ ಜನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನೀರಿನ ಸಮಸ್ಯೆಯೂ ಉಲ್ಬಣಿಸುತ್ತಿದೆ. ಇದೇ ಕಾರಣಕ್ಕೆ ಕುಡಿಯುವ ನೀರಿನ ಪೂರೈಕೆ ಗಾಗಿಯೇ ಸ್ವರ್ಣ ನದಿಗೆ ಇನ್ನೊಂದು ಜಲಾಶಯ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದೆ. ಹೊಸ ಜಲಾಶಯ ನಿರ್ಮಾಣ ಮಾಡಲು ಪ್ರಕ್ರಿಯೆ ಆರಂಭಿ ಸಲಾಗಿದೆ.

​ಸಣ್ಣ ನಗರಗಳ ಅಭಿವೃದ್ಧಿ ಯೋಜನೆ ‘ಅಮೃತ್‌’ ಹಾಗೂ ಕುಡ್ಸೆಂಪ್‌ ಯೋಜನೆ ಮತ್ತು ಏಷ್ಯನ್‌ ಡೆವಲಪ್‌ ಮೆಂಟ್ ಬ್ಯಾಂಕ್‌ ಸಹಕಾರದೊಂದಿಗೆ ಸುಮಾರು ₹105 ಕೋಟಿ ವೆಚ್ಚದಲ್ಲಿ ಇನ್ನೊಂದು ಜಲಾಶಯ ನಿರ್ಮಾಣ ಮಾಡಲಾಗುತ್ತದೆ. ಜಲಾಶಯ ನಿರ್ಮಾ ಣಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾ ಗುತ್ತಿದೆ. ಇನ್ನು ಎರಡು– ಮೂರು ವರ್ಷದಲ್ಲಿ ಈ ಯೋಜನೆ ಕಾರ್ಯಗತ ವಾಗುವ ನಿರೀಕ್ಷೆ ಇದೆ. ಜಲಾಶಯ ನಿರ್ಮಾಣವಾದರೆ ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ.

2046ರ ವೇಳೆಗೆ ಉಡುಪಿ ಜನ ಸಂಖ್ಯೆ ಎಷ್ಟಿರಬಹುದು ಎಂದು ಅಂಕಿ– ಅಂಶ ಆಧರಿಸಿ, ಅಷ್ಟು ಜನರಿಗೆ ನೀರು ಪೂರೈಸಲು ಅಗತ್ಯ ಇರುವಷ್ಟು ಸಾಮ ರ್ಥ್ಯದ ಜಲಾಶಯವನ್ನು ನಿರ್ಮಾಣ ಮಾಡಲಾಗುತ್ತದೆ. ಒಳ ಹರಿವು ನಿಂತ ನಂತರವಷ್ಟೇ ಮುಂದಿನ ತೀರ್ಮಾನಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ನಗರ ಸಭೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.