ADVERTISEMENT

28ರಿಂದ ಕೊಂಕಣಿ ಮಹಿಳಾ ಸಾಹಿತ್ಯ–ಸಂಸ್ಕೃತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2015, 4:42 IST
Last Updated 25 ನವೆಂಬರ್ 2015, 4:42 IST

ಉಡುಪಿ: ರಾಜ್ಯ ಕೊಂಕಣಿ ಮಹಿಳಾ ಸಾಹಿತ್ಯ– ಸಂಸ್ಕೃತಿ ಸಮಾವೇಶ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನವೆಂಬರ್‌ 28 ಮತ್ತು 29ರಂದು ನಡೆಯಲಿದೆ ಎಂದು ಸಮಾವೇಶದ ಗೌರವ ಅಧ್ಯಕ್ಷೆ ಸಂಧ್ಯಾ ಎಸ್‌.ಪೈ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತಿ ಪದ್ಮಾ ಶೆಣೈ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ಸಮ್ಮೇಳನದ ವೇದಿಕೆಗೆ ಕವಯತ್ರಿ ಸಮಾಜ ಸೇವಕಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಹೆಸರಿಡಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು 8ರಂದು ಸಂಜೆ 5 ಗಂಟೆಗೆ ಸಮ್ಮೇಳನವನ್ನು ಉದ್ಘಾಟಿಸುವರು. ಪರ್ಯಾಯ ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ ಅವರು ರಾಜಾಂಗಣದಿಂದ ಆರಂಭವಾಗಲಿರುವ ಸಾಂಸ್ಕೃತಿಕ ಜಾಥಾವನ್ನು ಮಧ್ಯಾಹ್ನ 3 ಗಂಟೆಗೆ ಉದ್ಘಾಟಿಸುವರು ಎಂದರು.

ಸಾಹಿತಿ ಶಾಲಿನಿ ಪ್ರಭು, ಚಲನಚಿತ್ರ ನಟಿಯರಾದ ನೀತು, ಐಶ್ವರ್ಯನಾಗ್‌, ಕೆಎಸ್‌ಡಿಎಲ್ ಅಧ್ಯಕ್ಷೆ ವೇರೋನಿಕ ಕರ್ನೇಲಿಯೊ, ವೈದ್ಯೆ ಡಾ. ಲಾವಣ್ಯಾ ಶ್ಯಾನುಭಾಗ್‌ ಅತಿಥಿಗಳಾಗಿರುವರು. ಛಾಯಾಚಿತ್ರ ಪ್ರದರ್ಶನ, ವಸ್ತು ಪ್ರದರ್ಶನ, ಕೊಂಕಣಿ ತಿಂಡಿ ತಿನಿಸುಗಳ ಪ್ರದರ್ಶನ ಏರ್ಪಡಿಸಲಾಗುವುದು. ಸಾಧಕಿಯರನ್ನು ಸಮ್ಮೇಳನದಲ್ಲಿ ಸನ್ಮಾನಿಸಲಾಗುವುದು ಎಂದರು. ಸಮ್ಮೇಳನದ ಕಾರ್ಯಾಧ್ಯಕ್ಷೆ ಲಕ್ಷ್ಮಿ ಎಸ್‌ ರಾವ್‌, ಪ್ರಧಾನ ಕಾರ್ಯದರ್ಶಿ ಶ್ರುತಿ ಜಿ ಶೆಣೈ, ಮಂಜುಳಾ ವಿ ನಾಯಕ್‌, ವೀಣಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.