ADVERTISEMENT

ಇರುವ ನೀರಿನ ಹಂಚಿಕೆಗೆ ಯೋಜನೆ ರೂಪಿಸಲಿದೆ ನಗರಸಭೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 7:31 IST
Last Updated 5 ಫೆಬ್ರುವರಿ 2018, 7:31 IST
ಹಿರಿಯಡಕ ಸಮೀಪ ಇರುವ ಬಜೆ ಜಲಾಶಯ.
ಹಿರಿಯಡಕ ಸಮೀಪ ಇರುವ ಬಜೆ ಜಲಾಶಯ.   

ಉಡುಪಿ: ಉಡುಪಿ ನಗರಕ್ಕೆ ನೀರು ಪೂರೈಸುವ ಬಜೆ ಜಲಾಶಯದಲ್ಲಿ ಹರಿವು ಈಗಾಗಲೇ ಸ್ಥಗಿತಗೊಂಡಿದ್ದು, ಇಡೀ ನಗರಸಭೆ ವ್ಯಾಪ್ತಿಯನ್ನು ಹಲವು ವಲಯಗಳನ್ನಾಗಿ ವಿಂಗಡಿಸಿ ಮಿತವಾಗಿ ನೀರು ಪೂರೈಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆ.

ಒಟ್ಟು 35 ವಾರ್ಡ್‌ಗಳು ಇದ್ದು ಸದ್ಯ ದಿನದ 24 ಗಂಟೆ ನೀರು ಪೂರೈಕೆಯಾಗುತ್ತಿದೆ. ಆದರೆ ಮಳೆಗಾಲದ ವರೆಗೆ ನೀರು ಸಾಕಾಗುವುದಿಲ್ಲ, ಆದ ಕಾರಣ ಇರುವ ನೀರನ್ನು ಲೆಕ್ಕ ಹಾಕಿ ಪೂರೈಕೆ ಮಾಡುವ ಬಗ್ಗೆ ನಗರಸಭೆ ತೀರ್ಮಾನ ಕೈಗೊಳ್ಳಲಿದೆ. ಅಗತ್ಯ ಇರುವ ಕಡೆಗೆ ಟ್ಯಾಂಕರ್‌ಗಳಲ್ಲಿಯೂ ನೀರು ನೀಡಲಾಗುತ್ತದೆ.

ಬಜೆಯಲ್ಲಿ ಇರುವ ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಪ್ರಮಾಣ 6 ಮೀಟರ್ ಇದ್ದು, ಅದು ಸೋಮವಾರ 5.83 ಮೀಟರ್‌ಗೆ ಇಳಿದಿದೆ. ಆದ್ದರಿಂದ ಮುಂದಿನ ಕ್ರಮದ ಬಗ್ಗೆ ಸದಸ್ಯರ ಸಮಿತಿಯ ಸಭೆ ಕರೆದು ಚರ್ಚಿಸಲಾಗುವುದು. ಅಲ್ಲಿ ಆಗುವ ತೀರ್ಮಾನದಂತೆ ನೀರು ಪೂರೈಕೆ ಮಾಡಲಾಗುವುದು ಎನ್ನುತ್ತಾರೆ ನಗರಸಭೆಯ ಅಧಿಕಾರಿ.

ADVERTISEMENT

ಎರಡು ಜಲಾಶಯ: ಸ್ವರ್ಣ ನದಿಗೆ ಬಜೆ ಮತ್ತು ಶಿರೂರಿನಲ್ಲಿ ಎರಡು ಪುಟ್ಟ ಜಲಾಶಯ ನಿರ್ಮಾಣ ಮಾಡಲಾಗಿದೆ. ಶಿರೂರು ಜಲಾಶಯದಲ್ಲಿ ಮರಳಿನ ಚೀಲಗಳ ತಡೆಗೋಡೆಯನ್ನು ಸಹ ಕಟ್ಟಿ ನೀರಿನ ಸಂಗ್ರಹ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಮೊದಲು ಮರಳಿನ ಚೀಲವನ್ನು ತೆರವು ಮಾಡಲಾಗುತ್ತದೆ. ಆ ನಂತರ ಉಳಿದ ನೀರಿನ ಹಂಚಿಕೆಗೆ ಯೋಜನೆ ರೂಪಿಸಲಾಗುತ್ತದೆ.

ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ನೀರಿನ ಅಭಾವ ತೀವ್ರವಾಗುತ್ತದೆ. ಜೂನ್‌ನಲ್ಲಿ ಮಳೆ ಆರಂಭವಾಗದಿದ್ದರೆ ಸಮಸ್ಯೆ ಹೆಚ್ಚಾಗುತ್ತದೆ. ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದರೆ ಹಾಗೂ ಘಟ್ಟದ ಮೇಲೆ ಒಳ್ಳೆಯ ಮಳೆಯಾದರೆ ಸಮಸ್ಯೆ ಇರುವುದಿಲ್ಲ.

ಕೃಷಿಗೆ ನೀರು ಇಲ್ಲ: ಒಳ ಹರಿವು ನಿಂತ ನಂತರ ಸ್ವರ್ಣ ನದಿ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಕೃಷಿಗೆ ಭೂಮಿಗೆ ನೀರು ಹಾಯಿಸಿಕೊಳ್ಳುವುದಕ್ಕೆ ಕಡಿವಾಣ ಹಾಕಲಾಗಿದೆ. ಬಳಸಿಕೊಳ್ಳದಂತೆ ಮನವಿಯನ್ನೂ ಮಾಡಲಾಗಿದೆ. ಪ್ರತಿ ವರ್ಷ ಎದುರಾಗುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವಾರಾಹಿಯಿಂದ ನೀರು ತರಲು ಯೋಜನೆ ರೂಪಿಸಲಾಗಿದೆ. ಆದರೆ ಆ ಯೋಜನೆಯ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಟೆಂಡರ್ ಹಂತ ಪೂರ್ಣಗೊಳ್ಳಲು ಸಹ ಕೆಲವು ತಿಂಗಳು ಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.