ADVERTISEMENT

‘ಮನಸ್ಸಿಗೆ ಮುದ ನೀಡುವುದೇ ಚಿತ್ರಕಲೆ’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 7:06 IST
Last Updated 20 ಫೆಬ್ರುವರಿ 2018, 7:06 IST

ಉಡುಪಿ: ಒತ್ತಡ ನಿವಾರಣೆಗೆ ಚಿತ್ರಕಲೆ ಉತ್ತಮ ಸಾಧನ ಎಂದು ಕಲಾವಿದ ಹಾಗೂ ಮಣಿಪಾಲ ಚಿತ್ರಕಲಾ ಶಾಲೆಯ ನಿರ್ದೇಶಕ ಪಿ.ಎನ್. ಆಚಾರ್ಯ ಹೇಳಿದರು.

ಮಣಿಪಾಲ ಚಿತ್ರಕಲಾ ಶಾಲೆ ಹಾಗೂ ಚಿತ್ರಕಲಾ ಮಂದಿರ ಉಡುಪಿ ನಗರದ ಸರ್ವೀಸ್ ಬಸ್ ನಿಲ್ದಾಣದ ಮುಂಭಾಗ ಇರುವ ವಿಭೂತಿ ಆರ್ಟ್‌ ಗ್ಯಾಲರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಮಕ್ಕಳ ಚಿತ್ರಕಲಾ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಲೆ ಎಂಬುದು ಮನಸ್ಸಿಗೆ ಮುದು ನೀಡುತ್ತದೆ. ಕೆಲವು ಕಾಲ ಇದರಲ್ಲಿ ತೊಡಗಿಕೊಂಡರೆ ಮನಸ್ಸು ಹಗುರಾಗುತ್ತದೆ ಎಂದು ಅವರು ಹೇಳಿದರು.

‘ಮಣಿಪಾಲ ಕಸ್ತೂರಬಾ ಆಸ್ಪತ್ರೆಯ ಕೆಲವು ವೈದ್ಯರು ಸಹ ಕಲಾ ಶಾಲೆಗೆ ಬರುತ್ತಾರೆ. ಗಂಟೆ ಗಟ್ಟಲೆ ಅವರು ಕಲಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಪ್ರತಿ ನಿಮಿಷವೂ ಅಮೂಲ್ಯ ಆಗಿರುವ ವೇಳೆ ಏಕೆ ಅವರು ಈ ರೀತಿ ಶಾಲೆಯಲ್ಲಿ ಕಾಲ ಕಳೆಯುತ್ತಾರೆ ಎಂಬ ಕುತೂಹಲ ಮೂಡಿತು. ಅವರನ್ನು ಕೇಳಿದಾಗ ಒತ್ತಡ ನಿವಾರಣೆಗೆ ಎಂಬ ಉತ್ತರ ಬಂತು. ಕಲೆ ಎಷ್ಟು ಮುಖ್ಯ ಎನ್ನುವುದು ಅವರ ಮಾತಿನಿಂದ ಗೊತ್ತಾಯಿತು’ ಎಂದರು.

ADVERTISEMENT

ರಾಘವೇಂದ್ರ ರಾವ್ ಮತ್ತು ರೇಖಾ ರಾವ್ ದಂಪತಿಯ ಮಗಳು ಮಮತಾ ಅವರಿಗೆ ಕಲೆ ಬೋಧನೆ ಮಾಡುವ ಮೂಲಕ ಈ ಶಾಲೆ ಆರಂಭವಾಯಿತು. ಆ ನಂತರ ಹತ್ತಾರು ಮಕ್ಕಳು ಶಾಲೆಗೆ ಬಂದ ನಂತರ ಪೂರ್ಣ ಪ್ರಮಾಣದಲ್ಲಿ ವಿಸ್ತಾರಗೊಂಡಿತು. ಇದನ್ನು ಹಣ ಮಾಡುವ ಉದ್ದೇಶಕ್ಕೆ ಮಾಡಿಲ್ಲ. ಮಕ್ಕಳಿಗೆ ಚಿತ್ರಕಲೆಯನ್ನು ಕಲಿಸುವ ಏಕೈಕ ಉದ್ದೇಶ ಇದರ ಹಿಂದಿದೆ.

ಈ ಶಾಲೆಯಲ್ಲಿ ಕಲಿತ ಮಕ್ಕಳು ಸಾಧಕರಾಗಿ ಹೊರ ಹೊಮ್ಮಿದ್ದಾರೆ. ಅಮೆರಿಕ ಸೇರಿದಂತೆ ಹಲವಾರು ದೇಶಗಳಲ್ಲಿ ನೆಲೆಸಿದ್ದಾರೆ. ಅವರು ಕರೆ ಮಾಡಿ ಮಾತನಾಡಿದಾಗ ಮಾಡಿದ ಕೆಲಸ ಸಾರ್ಥಕ ಎನಿಸುತ್ತದೆ ಎಂದು ಅವರು ಹೇಳಿದರು.

ಕೊಡವೂರಿನ ಶಿರಡಿ ಸಾಯಿಬಾಬ ಮಂದಿರದ ಧರ್ಮದರ್ಶಿ ದಿವಾಕರ ಶೆಟ್ಟಿ ತೋಟದ ಮನೆ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. ಜಿಲ್ಲಾ ಮಟ್ಟದ್ದು ಮಾತ್ರವಲ್ಲ, ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನವನ್ನು ನಮ್ಮ ಮಂದಿರದಲ್ಲಿ ಆಯೋಜಿಸಿ ಎಂದು ಅವರು ಮನವಿ ಮಾಡಿದರು.

ಕೊಡಂಕೂರಿನ ನಾಗರಿಕರ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ರಘುನಾಥ ಮಾಬೆನ್ ಮಾತನಾಡಿ, ಕಲೆಗೆ ಭಾಷೆ ಎಂಬುದಿಲ್ಲ. ಎಲ್ಲ ಭಾಷೆಯವರಿಗೂ ಅದು ಅರ್ಥವಾಗುತ್ತದೆ ಎಂದರು. ಚಿತ್ರಕಲಾ ಮಂದಿರದ ನಿರ್ದೇಶಕ ಡಾ. ಯು.ಸಿ. ನಿರಂಜನ್, ಪ್ರಾಂಶುಪಾಲ ರಾಜೇಂದ್ರ ತ್ರಾಸಿ, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸದಸ್ಯ ರಾಘವೇಂದ್ರ ಕೆ ಅಮಿನ್ ಇದ್ದರು.

* * 

ಮನುಷ್ಯರು ಕಟ್ಟುವ ಕಟ್ಟಡಗಳು ಐವತ್ತು ನೂರು ವರ್ಷಗಳಲ್ಲಿ ಬಿದ್ದು ಹೋಗುತ್ತವೆ. ಆದರೆ ಕಲಾವಿನ ಕೃತಿಯೊಂದು ಸಾವಿರಾರು ವರ್ಷ ಇರುತ್ತದೆ.
ನಾರಾಯಣ ಆಚಾರ್ಯ
ಭವಾನಿ ಬಿಲ್ಡರ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.